ನೀರುಕುಡಿಯಲು ನದಿಗೆ ಇಳಿದ ಎಮ್ಮೆ ಹೊತ್ತೊಯ್ದ ಮೊಸಳೆ: ಗ್ರಾಮಸ್ಥರಲ್ಲಿ ಆತಂಕ
ವಿಜಯಪಥ ಸಮಗ್ರ ಸುದ್ದಿ
ಬಾಗಲಕೋಟೆ: ನೀರುಕುಡಿಯಲ್ಲಿ ನಡಿಗೆ ಇಳಿದ ಎಮ್ಮೆಯನ್ನು ಮೊಸಳೆ ಹೊತ್ತೊಯ್ದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ ನಡೆದಿದೆ.
ಕೃಷ್ಣಾ ನದಿ ದಡದ ಗ್ರಾಮವಾಗಿರುವ ಶೂರ್ಪಾಲಿ ಬಳಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ನೀರು ಕುಡಿಯಲು ಎಮ್ಮೆಯೊಂದು ಬುಧವಾರ ಹೋಗಿದೆ. ನದಿ ದಡದಲ್ಲೇ ದಾಳಿಗೆ ಹೊಂಚುಹಾಕಿ ಕುಳಿತಿದ್ದ ಮೊಸಳೆ, ನೀರು ಕುಡಿಯಲು ನದಿಗೆ ಇಳಿದ ಎಮ್ಮೆಯನ್ನು ಎಳೆದೊಯ್ದಿದೆ.
ಮೊಸಳೆ ಎಮ್ಮೆಯನ್ನ ಎಳೆದೊಯ್ಯುವ ದೃಶ್ಯವನ್ನು ಗ್ರಾಮಸ್ಥರು ತಮ್ಮ ಮೊಬೈಲ್‍ನಲ್ಲಿ ಲೈವ್ ವೀಡಿಯೋ ಮಾಡಿ ಸೆರೆ ಹಿಡಿದಿದ್ದಾರೆ. ಪ್ರತೀ ವರ್ಷ ಬೇಸಿಗೆ ಆರಂಭವಾಗ್ತಿದ್ದಂತೆ ನದಿದಡದ ಗ್ರಾಮಸ್ಥರಿಗೆ ಮೊಸಳೆ ದಾಳಿ ತಲೆ ನೋವಾಗಿ ಪರಿಣಮಿಸುತ್ತಿದೆ.
ಪ್ರತಿವರ್ಷವು ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಾಗ್ತಿದ್ದಂತೆ ಮೊಸಳೆಗಳು ಪ್ರಾಣಿಗಳು ಹಾಗೂ ಮನುಷ್ಯರ ಮೇಲೆ ದಾಳಿ ನಡೆಸಿರುವ ಉದಾಹರಣೆಗಳಿವೆ. ಈಗ ನದಿಯಲ್ಲಿ ನೀರು ಕಡಿಮೆಯಾಗಿದ್ದು ಮತ್ತೆ ಮೊಸಳೆಗಳ ಹಾವಳಿ ಹೆಚ್ಚಾಗಿದೆ. ಮೊಸಳೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ನದಿ ಪಾತ್ರದ ಶೂರ್ಪಾಲಿ, ಕಂಕನವಾಡಿ ಹಾಗೂ ಮುತ್ತೂರು ಗ್ರಾಮಸ್ಥರಿಗೆ ಮೊಸಳೆ ದಾಳಿ ಆತಂಕ ಮೂಡಿಸಿದೆ.
ಇದರಿಂದ ಬೆಚ್ಚಿ ಬಿದ್ದಿರುವ ಗ್ರಾಮಸ್ಥರು ಮೊಸಳೆಯನ್ನು ಸೆರೆ ಹಿಡಿದು ನಮ್ಮನ್ನು ರಕ್ಷಿಸಲು ಅರಣ್ಯ ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಜತೆಗೆ ಮೊಸಳೆಗಳು ಬರುವ ನದಿ ತಟ್ಟದಲ್ಲಿ ಎಚ್ಚರಿಕೆ ಫಲಕ ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.