ಬೆಳಗಾವಿ: ಬೆಳಗಾವಿಯ ಎಲ್ಲ ತಾಪಂ ಹಾಗೂ ಜಿಪಂ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷದ ಸ್ಪರ್ಧೆ ಮಾಡಲಿದೆ ಎಂದು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ತಿಳಿಸಿದ್ದಾರೆ.
ತಾಪಂ ಹಾಗೂ ಜಿಪಂ ಕ್ಷೇತ್ರಗಳಿಗೆ ಪ್ರಾಮಾಣಿಕ, ವಿದ್ಯಾವಂತ , ಜನ ಪರ ಚಿಂತನೆಯುಳ್ಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಬೆಳಗಾವಿಯ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಸದಂ ತಿಳಿಸಿದರು.
ರಾಜ್ಯ ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮಿ ಕಾಂತರಾವ್ ಮುಖಂಡತ್ವದಲ್ಲಿ ಜಿಲ್ಲಾಮಟ್ಟದ ಆಮ್ ಆದ್ಮಿ ಪಕ್ಷದ ಕಾನೂನು ವಿಭಾಗದ, ಮಾಧ್ಯಮಗಳ ವಿಭಾಗಗಳನ್ನು ರಚನೆ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಹಲವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಪಕ್ಷವು ಬೆಳಗಾವಿಯ ಎಲ್ಲ ಭಾಗಗಳಲ್ಲಿಯೂ ಸಂಘಟಿತವಾಗಿ ರಾಜ್ಯ ಹಾಗೂ ಜಿಲ್ಲಾ ತಂಡ ಸಂಚರಿಸಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಜಿಲ್ಲೆಯ ಎಲ್ಲ ಪ್ರಾಮಾಣಿಕ ಜನರು ರಾಜಕೀಯ ಪರಿವರ್ತನೆಗಾಗಿ ಆಮ್ ಆದ್ಮಿ ಪಕ್ಷವನ್ನು ಈ ಮೂಲಕ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈ ನಡುವೆ ಕರ್ನಾಟಕದ ರಾಜಕಾರಣದಲ್ಲಿ ಬೆಳಗಾವಿ ಜಿಲ್ಲೆಯು ಇತ್ತೀಚಿನ ದಿನಗಳಲ್ಲಿ ಕಪ್ಪು ಚುಕ್ಕೆಯಾಗಿ ಮಾರ್ಪಾಡಾಗಿ ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.
ಬೆಳಗಾವಕರ ಉಪಾಧ್ಯಾಯ, ನ್ಯಾಯವಾದಿ ಪೂಜಾ ಕಾಕತ್ಕರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.