ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಚಿತ್ರ ನಟರ ಅಭಿಮಾನಿ ಸಂಘಗಳು ಕೇವಲ ಮನರಂಜನೆಗೆ ಸೀಮಿತವಾಗದೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದು ಪಿರಿಯಾಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಎನ್. ವಿಜಯ್ ಹೇಳಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಆವರಣದಲ್ಲಿ ಚಿತ್ರ ನಟ ಕ್ರೇಜಿಸ್ಟಾರ್ ಡಾ.ವಿ. ರವಿಚಂದ್ರನ್ ಅವರ 60ನೇ ಹುಟ್ಟುಹಬ್ಬ ಅಂಗವಾಗಿ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ವತಿಯಿಂದ ಪತ್ರಕರ್ತರಿಗೆ ನೀಡಿದ ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳನ್ನು ವಿತರಿಸಿ ಮಾತನಾಡಿದರು.
ಕನ್ನಡ ಚಿತ್ರರಂಗವನ್ನು ಹಲವಾರು ವಿಭಿನ್ನ ಹೊಸ ಪ್ರಯೋಗಗಳ ಮೂಲಕ ದೇಶಕ್ಕೆ ಪರಿಚಯಿಸಿದ ಕೀರ್ತಿ ರವಿಚಂದ್ರನ್ ಅವರಿಗೆ ಸಲ್ಲುತ್ತದೆ, ಅವರ ಹುಟ್ಟುಹಬ್ಬವನ್ನು ಪತ್ರಕರ್ತರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿ ಆಚರಿಸಿದ್ದು ಸಂತಸಕರ ಎಂದರು.
ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಪತ್ರಕರ್ತ ಸತೀಶ್ ಆರಾಧ್ಯ ಮಾತನಾಡಿ, ಸಂಘ ಸ್ಥಾಪನೆಯಾದ 28 ವರ್ಷಗಳಿಂದಲೂ ಪ್ರತಿ ವರ್ಷ ರವಿಚಂದ್ರನ್ ಹುಟ್ಟುಹಬ್ಬ ದಿನ ಸೇರಿದಂತೆ ಹಲವು ದಿನಗಳಂದು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೊರೊನಾ ಸೋಂಕಿನ ಕಾರಣ ಈ ಬಾರಿ ಅದ್ದೂರಿ ಹುಟ್ಟುಹಬ್ಬ ಆಚರಣೆಗೆ ಕಡಿವಾಣ ಹಾಕಿ ಕೊರೊನಾ ವಾರಿಯರ್ಸ್ ಗಳಿಗೆ ಕೈಲಾದ ಸಹಾಯ ಮಾಡಲಾಗಿದೆ ಎಂದರು.
ಇದೇ ವೇಳೆ ಸಂಘದ ವತಿಯಿಂದ ಪಟ್ಟಣದ ಆರಕ್ಷಕ ಇಲಾಖೆ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಮಧ್ಯಾಹ್ನದ ಉಪಾಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು.
ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಎನ್. ದೇವೇಗೌಡ, ಉಪಾಧ್ಯಕ್ಷ ಬಿ.ಸಿ. ತಮ್ಮಣ್ಣೆಗೌಡ, ಕಾರ್ಯದರ್ಶಿ ಮಲ್ಲೇಶ್, ನಿರ್ದೇಶಕರಾದ ಪಿ.ಎಸ್ ವೀರೇಶ್, ಪಿ.ಡಿ ಪ್ರಸನ್ನ, ಬಿ.ಎಸ್ ಪ್ರಸನ್ನಕುಮಾರ್, ಇಮ್ತಿಯಾಜ್ ಅಹ್ಮದ್, ರವಿಚಂದ್ರ ಬೂದಿತಿಟ್ಟು, ಅಶೋಕ್ ಆಲನಹಳ್ಳಿ, ಜಿಲ್ಲಾ ಸಂಘದ ನಿರ್ದೇಶಕ ಬಿ.ಆರ್ ಗಣೇಶ್, ಹಿರಿಯ ಪತ್ರಕರ್ತ ಟಿ.ಜೆ.ಆನಂದ್, ಸದಸ್ಯರಾದ ಸ್ವಾಮಿ ಬಾವಲಾಳು, ಬಿ.ಆರ್ ರಾಜೇಶ್, ಪತ್ರಕರ್ತರಾದ ಸಿ.ಜಿ ಪುನೀತ್, ವೆಂಕಟೇಶ್ ಇದ್ದರು.