ಬೆಂಗಳೂರು : ಸ್ಯಾಂಡಲ್‌ವುಡ್ ಕನ್ನಡ ಸಿನಿಮಾರಂಗದಲ್ಲಿ ಚಿರಪರಿಚಿತರಾಗಿದ್ದ ಹಿರಿಯ ನಟ ಸತ್ಯಜಿತ್ ಭಾನುವಾರ ಮುಂಜಾನೆ ನಿಧನರಾಗಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ 72 ವರ್ಷದ ಸತ್ಯಜಿತ್ ಕೊನೆಯುಸಿರೆಳೆದಿದ್ದಾರೆ.
ಸತ್ಯಜಿತ್ ಅವರ ಮೊದಲ ಹೆಸರು ಸಯ್ಯದ್ ನಿಜಾಮುದ್ದೀನ್. ಸಿನಿಮಾ ರಂಗಕ್ಕೆ ಕಾಲಿಟ್ಟ ನಂತರದಲ್ಲಿ ತನ್ನ ಹೆಸರನ್ನು ಸತ್ಯಜಿತ್ ಎಂದು ಬದಲಾಯಿಸಿಕೊಂಡಿದ್ದರು.
ಕಳೆದ ಕೆಲವು ದಿನಗಳಿಂದಲೂ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸತ್ಯಜಿತ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ರಾತ್ರಿ 2 ಗಂಟೆಯಲ್ಲಿ ನಿಧನರಾಗಿದ್ದಾರೆ.
ಈ ಮೊದಲು ಗ್ಯಾಂಗ್ರಿನ್‌ನಿಂದ ಬಳಲುತ್ತಿದ್ದ ಅವರು ಒಂದು ಕಾಲನ್ನು ಕಳೆದುಕೊಂಡಿದ್ದರು. ಅಲ್ಲದೇ ಮಧುಮೇಹದಿಂದಲೂ ಬಳಲುತ್ತಿದ್ದರು.
ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಹೆಗಡೆ ನಗರದಲ್ಲಿರುವ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗಿದ್ದು ಬೆಳಗ್ಗೆ 10 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಮಧ್ಯಾಹ್ನ 2 ಗಂಟೆಗೆ ಹೆಗಡೆ ನಗರದ ಖಬರಸ್ಥಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಬಾಲಿವುಡ್‌ನ ಅಂಕುಷ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸತ್ಯಜಿತ್, ಅರುಣ ರಾಗ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ನಲ್ಲಿ ನಟಿಸೋದಕ್ಕೆ ಆರಂಭಿಸಿದ್ದರು.
ಮೊದಲ ಸಿನಿಮಾದಲ್ಲಿಯೇ ಮನೋಜ್ಞ ಅಭಿನಯದ ಮೂಲಕ ಸತ್ಯಜಿತ್ ಮನೆ ಮಾತಾದ್ರು. ನಂತರ ಮಿ.ರಾಜ, ತಾಯಿಗೊಮ್ಮ ಕರ್ಣ, ಶಿವ ಮೆಚ್ಚಿದ ಕಣ್ಣಪ್ಪ, ರಣರಂಗ, ನಮ್ಮೂರ ರಾಜ, ಯುದ್ದಕಾಂಡ, ಪದ್ಮವ್ಯೂಹ, ಇಂದ್ರಜಿತ್, ನಮ್ಮೂರ ಹಮ್ಮೀರ, ಪೊಲೀಸ್ ಲಾಕ್ ಅಪ್, ಚೈತ್ರದ ಪ್ರೇಮಾಂಜಲಿ, ಸಂಘರ್ಷ, ಪುಣ್ನಂಜ, ಯಮಕಿಂಕರ, ಮೋಜುಗಾರ ಸೊಗಸುಗಾರ.
ಪೊಲೀಸ್ ಸ್ಟೋರಿ, ಗುಲಾಬಿ, ಹನಿಮೂನ್, ಇಂದ್ರ, ಅರಸರು, ಹುಡುಗಾಟ, ಆಪ್ತಮಿತ್ರ, ಅಭಿ, ಧಮ್, ಅಪ್ಪು, ಸತ್ಯಮೇವ ಜಯತೆ, ಫ್ರಿನ್ಸ್, ಕಳ್ಳಮಂಜ, ಕಟಾರಿವೀರ ಸಂಗೊಳ್ಳಿ ರಾಯಣ್ಣ, ಸ್ನೇಹಿತರು, ಗಾಡ್ ಫಾದರ್, ಲಕ್ಕಿ, ಶಾರ್ಪ್ ಶೂಟರ್, ಉಪ್ಪಿ -2. ವಿರಾಟ್ ಸೇರಿದಂತೆ 650 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಸತ್ಯಜಿತ್ 2018 ರಲ್ಲಿ ತೆರೆಕಂಡ 2nd Half ಅವರು ನಟನೆಯ ಕೊನೆಯ ಸಿನಿಮಾ ಆಗಿದೆ.
ಸತ್ಯಜಿತ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.