ಬೆಂಗಳೂರು: ಏಷ್ಯಾಖಂಡಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಅತ್ಯುತ್ತಮ ಹೆಸರಿದೆ. ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಹೀಗಾಗಿ ನಮ್ಮ ಸಾರಿಗೆಯನ್ನು ಇನ್ನಷ್ಟು ಜನಸ್ನೇಹಿ ಆಗಿಸಬೇಕು ಎಂದು ಸಾರಿಗೆ ಸಂಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತಿದೆ.
ಅದರಂತೆ ಇಟಿಎಂಗಳನ್ನು (ಎಲೆಕ್ಟ್ರಾನಿಕ್ ಟಿಕೆಟ್ ಮೆಶಿನ್ -Electronic Ticketing Machine ) ಪರಿಚಯಿಸಿದ್ದು ಅವು ಹೊಸದರಲ್ಲಿ ಸರಿಯಾಗಿ ಕೆಲಸ ಮಾಡುತ್ತಿದ್ದವು, ಬರಬರುತ್ತ ಅವುಗಳು ಹಳೆಯದಾಗಿದ್ದು ಈಗ ಬಹುತೇಕ ಇಟಿಎಂಗಳು ಕೆಟ್ಟಿದ್ದು, ಅವುಗಳ ದುರಸ್ತಿ ಮಾಡಲಾರದೆ, ಅವುಗಳನ್ನೇ ನಿರ್ವಾಹಕರಿಗೆ ಕೊಡುತ್ತಿರುವುದರಿಂದ ಟಿಕೆಟ್ ಸರಿಯಾಗಿ ಬಾರದೆ ತಲೆ ನೋವಾಗಿ ಪರಿಣಮಿಸಿದೆ.
ಇನ್ನು ಒಂದು ಕಡೆ ತನ್ನ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದಿರುವುದು. ಸಂಸ್ಥೆಯನ್ನು ಮಲತಾಯಿಯಂತೆ ಸರ್ಕಾರ ನೋಡುತ್ತಿರುವುದು, ಇದರ ನಡುವೆಯೂ ಸಾರಿಗೆ ಸಂಸ್ಥೆ ವ್ಯವಸ್ಥೆಯನ್ನು ಆಧುನಿಕತೆ ಮಾಡಲು ಪೇಪರ್ ಟಿಕೆಟ್ ಗಳನ್ನು ಬಳಸದೇ ಅತ್ಯಾಧುನಿಕ ಮೆಶಿನ್ಗಳ ಮೂಲಕ ಟಿಕೆಟ್ ವಿತರಿಸುವ ಯೋಜನೆಯನ್ನೂ ಜಾರಿ ಮಾಡಿದ್ದು ಈಗ ಅವುಗಳು ಕೆಲಸಕ್ಕೆ ಬಾರದವುಗಳಾಗುತ್ತಿವೆ.
ಬಿಎಂಟಿಸಿಯಲ್ಲಿವೆ 10 ಸಾವಿರಕ್ಕೂ ಹೆಚ್ಚು ಟಿಕೆಟ್ ಮೆಶಿನ್ಗಳು: ಬಿಎಂಟಿಸಿ 10 ಸಾವಿರಕ್ಕೂ ಹೆಚ್ಚು ಟಿಕೆಟ್ ಮೆಶಿನ್ಗಳನ್ನು ಖರೀದಿ ಮಾಡಿದೆ. ಆದರೆ ಈಗ ಆ ಇಟಿಎಂ ಮೆಶಿನ್ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಒಂದು ಟಿಕೆಟ್ ಪ್ರಿಂಟ್ ಬರಲು ಅರ್ಧ ಅಥವಾ ಒಂದು ತಾಸು ತೆಗೆದುಕೊಳ್ಳುತ್ತದೆ ಎಂಬ ದೂರುಗಳು ಕೇಳಿಬಂದಿವೆ.
ಇದರಿಂದ ಪ್ರಯಾಣಿಕರಿಗೆ ಟಿಕೆಟ್ ಕೊಡಲು ಆಗದೆ ಬಿಎಂಟಿಸಿ ಕಂಡಕ್ಟರ್‌ಗಳು ಪರದಾಡುತ್ತಿದ್ದಾರೆ. ಹೀಗಾಗಿ ಮತ್ತೆ ನಿತ್ಯ ಸಾವಿರಾರು ಬಸ್‌ಗಳಲ್ಲಿ ಹಳೇ ಪದ್ಧತಿಯಂತೆ ನಿರ್ವಾಹಕರು ಪೇಪರ್ ಟಿಕೆಟ್ ನೀಡುತ್ತಿದ್ದಾರೆ. ಕೆಟ್ಟುಹೋಗಿರುವ ಇಟಿಎಂಗಳ ನಿರ್ವಹಣೆ ಆಗದಿರುವುದು ಮತ್ತು ಅದರ ನಿರ್ವಹಣೆ ಮಾಡುವ ಟ್ರೈಮಾಕ್ಸ್ ಕಂಪನಿಗೆ ನಿಗದಿತ ಸಮಯಕ್ಕೆ ನಿಗಮ ಹಣ ನೀಡದಿರುವುದು ಈ ಅವ್ಯವಸ್ಥೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಮತ್ತೆ 10 ಸಾವಿರ ಹೊಸ ಇಟಿಎಂ ಯಂತ್ರಗಳ ಖರೀದಿ…!: ಹಳೆಯ ಇಟಿಎಂ ಮೆಶಿನ್ಗಳೇ ಸರಿಯಾಗಿ ಕೆಲಸ ಮಾಡುತ್ತಿಲ್ಲವಾದರೂ ಮತ್ತೆ 10 ಸಾವಿರ ಹೊಸ ಇಟಿಎಂ ಯಂತ್ರಗಳ ಖರೀದಿಗೆ ಬಿಎಂಟಿಸಿ ಮುಂದಾಗಿದೆ. ಇದು ಸಾಲದು ಎಂಬಂತೆ ಬಿಎಂಟಿಸಿಯ ಟಿಕೆಟ್ ತನಿಖಾ ಸಿಬ್ಬಂದಿ ಬಸ್‌ಗಳಲ್ಲಿ ಟಿಕೆಟ್ ಚೆಕ್ಕಿಂಗ್ ಹೆಸರಲ್ಲಿ ಪ್ರಯಾಣಿಕರಿಗೆ ದಂಡ ಹಾಕುತ್ತಿದ್ದಾರೆ. ಅದರ ಜತೆಗೆ ಮೆಶಿನ್ ಕೆಲಸ ಮಾಡದೇ ಟಿಕೆಟ್ ಕೊಡದ ಕಾರಣಕ್ಕೆ ಕಂಡಕ್ಟರ್ಗಳನ್ನು ಅಮಾನತು ಕೂಡ ಮಾಡಲಾಗುತ್ತಿದೆ.
ನಿಗಮಕ್ಕೆ ಕೋಟಿ ಕೋಟಿ ರೂ. ನಷ್ಟ: ಐಟಿಎಸ್ ಅಡಿಯಲ್ಲಿ ಆಳವಡಿಸಿರುವ ಇಟಿಎಂ ಮೆಶಿನ್ ಮತ್ತು ಜಿಪಿಎಸ್ ಗಳು ಬಿಎಂಟಿಸಿ ಬಸ್‌ಗಳಲ್ಲಿ ಅಧ್ವಾನ ಸೃಷ್ಟಿಸಿವೆ. ಇದರಿಂದ ನಿಗಮಕ್ಕೆ ಕೋಟಿ ಕೋಟಿ ರೂ. ನಷ್ಟ ಆಗಿದೆ. ಇಟಿಎಂ ಕಂಪನಿ ನಾವು ದಿವಾಳಿ ಆಗಿದ್ದೇವೆ ಎಂದಿದ್ದು, ಈಗಾಗಲೇ ನೀಡಿರುವ ಹತ್ತು ಸಾವಿರ ಮೆಶಿನ್ಗಳನ್ನು ರಿಪೇರಿ ಮಾಡಲು ನಿರಾಕರಿಸಿದೆ. ಕೆಟ್ಟು ಹೋಗಿರುವ ಮೆಶಿನ್ ನಿರ್ವಹಣೆ ಮಾಡಲಾಗದಿದ್ದರೂ ಹೊಸದಾಗಿ ಯಂತ್ರಗಳ ಖರೀದಿಗೆ ಬಿಎಂಟಿಸಿ ಪ್ಲಾನ್ ಮಾಡಿದೆ. ಇದು ಬಿಎಂಟಿಸಿ ಚಾಲಕರು ಮತ್ತು ಕಂಡಕ್ಟರ್ಗಳನ್ನು ಆತಂಕಕ್ಕೆ ದೂಡಿದೆ.
ಕೇಂದ್ರ ಕಚೇರಿಯಲ್ಲೇ ಕುಳಿತು ವೀಕ್ಷಣೆ: ಐಟಿಎಸ್ (ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಮ್) ಅಡಿ ಎಲ್ಲ ಬಸ್‌ಗಳಲ್ಲಿ ವೆಹಿಕಲ್ ಟ್ರಾಕಿಂಗ್ ಸಿಸ್ಟಂ (ವಿಟಿಎಸ್) ಅಳವಡಿಸಲಾಗಿದೆ. ಪ್ರತಿ ಬಸ್ ಮೇಲೆ ನಿಗಾ ಇರಿಸುವ ತಂತ್ರಜ್ಞಾನ ಇದಾಗಿದ್ದು, ಜತೆಗೆ ಇಟಿಎಂ ಮುಖಾಂತರ ಪ್ರತಿ ಬಸ್‌ಗಳಲ್ಲಿ ಎಷ್ಟು ಟಿಕೆಟ್ ವಿತರಣೆಯಾಗುತ್ತಿದೆ ಎನ್ನುವುದನ್ನು ಕೇಂದ್ರ ಕಚೇರಿಯಲ್ಲೇ ಕುಳಿತು ವೀಕ್ಷಿಸಬಹುದು.
ನಿಗಮ ಪ್ರತಿ ತಿಂಗಳು 80-90 ಲಕ್ಷ ರೂ. ಇಟಿಎಂಗಳ ಬಾಡಿಗೆ ಕಟ್ಟುತ್ತಿದೆ: ಈ ವ್ಯವಸ್ಥೆಗೆ ಪ್ರತಿ ತಿಂಗಳು ನಿಗಮ ಬಾಡಿಗೆ ಕಟ್ಟುತ್ತಿದೆ. 5 ವರ್ಷಗಳ ಒಪ್ಪಂದದಂತೆ ಬಿಎಂಟಿಸಿ ಒಂದು ಇಟಿಎಂಗೆ ಪ್ರತಿ ತಿಂಗಳು 684 ರೂ. ಮತ್ತು ವಿಟಿಎಎಸ್ಗೆ ಪ್ರತಿ ತಿಂಗಳು 695 ರೂ. ಬಾಡಿಗೆ ಕಟ್ಟುತ್ತಿದೆ. ನಿಗಮದ ಎಲ್ಲ ಘಟಕಗಳಿಗೆ ಒಟ್ಟು 10,498 ಇಟಿಎಂ ನೀಡಲಾಗಿದೆ ಮತ್ತು ಅಂದಾಜು 6,400 ಬಸ್‌ಗಳಲ್ಲಿ ವಿಟಿಎಸ್ ಅಳವಡಿಸಲಾಗಿದೆ.
ಇವೆಲ್ಲ ಸೇರಿ ನಿಗಮ ಪ್ರತಿ ತಿಂಗಳು 80-90 ಲಕ್ಷ ರೂ. ಬಾಡಿಗೆ ಕಟ್ಟುತ್ತಿದೆ. ಆದರೆ ಇದೀಗ ಕಂಪನಿ ನಷ್ಟದಲ್ಲಿ ಸಿಲುಕೊಂಡಿರುವ ಕಾರಣ ಐಟಿಎಸ್ ನ್ನು ನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ ಪ್ರಸ್ತುತ ಬಹುತೇಕ ಬಿಎಂಟಿಸಿ ಬಸ್ ಗಳಲ್ಲಿ ಪೇಪರ್ ಟಿಕೆಟ್ ವಿತರಣೆ ಅನಿವಾರ್ಯವಾಗಿದೆ.