ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರ ಆಪ್ತ ಸಹಾಯಕನನ್ನು ಕೋಟ್ಯಂತರ ರೂ.ಗಳ ಆರ್ಥಿಕ ಅಪರಾಧದಲ್ಲಿ ಬಂಧಿಸಿ ನಂತರ ಮುಖ್ಯಮಂತ್ರಿಗಳ ಒತ್ತಡದಿಂದ ಆರೋಪಿಯನ್ನು ಬಿಡುಗಡೆ ಮಾಡಿರುವ ಸರ್ಕಾರದ ಗೃಹ ಇಲಾಖೆಯ ಸ್ವೇಚ್ಛಾಚಾರವನ್ನು ಆಮ್ ಆದ್ಮಿ ಪಕ್ಷ ಖಂಡಿಸಿ ಇಂದು (ಜು.3) ಬೆಳಗ್ಗೆ 11.30 ಕ್ಕೆ ನಗರದ ಮೈಸೂರು ರಸ್ತೆಯಲ್ಲಿನ ಸಿಸಿಬಿ (ಕೇಂದ್ರ ಅಪರಾಧ ದಳ) ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ರಾಜ್ಯದಲ್ಲಿ ಜನಸಾಮಾನ್ಯರಿಗೊಂದು ನ್ಯಾಯ ಅಧಿಕಾರಸ್ಥರಿಗೆ ಒಂದು ನ್ಯಾಯವೇ ? ಎಂದು ಪ್ರಶ್ನಿಸಿರುವ ಪಕ್ಷದ ಮುಖಂಡರು, ಈ ಬಂಧನ ಹಾಗೂ ಬಿಡುಗಡೆಯ ಹಿಂದಿನ ಸತ್ಯಾಂಶ ರಾಜ್ಯದ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಶ್ರೀರಾಮುಲು ಆಪ್ತ ಸಹಾಯಕ ಆರೋಪಿ ರಾಜಣ್ಣ ಮರು ಬಂಧನ ಆಗಲೇಬೇಕು. ಮುಖ್ಯಮಂತ್ರಿಗಳ ಮಗ ವಿಜಯೇಂದ್ರ ಅವರ ವಿಚಾರಣೆಯು ಸಹ ಆಗಬೇಕು. ಜತೆಗೆ ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯಗಳ ಮೂಲಕವೂ ಸಹ ಪ್ರಭಾವಿಗಳ ಅಕ್ರಮಗಳು ಹೊರಬರಬೇಕಿದೆ ಎಂದು ಒತ್ತಾಯಿಸಿದೆ.
ಈ ರೀತಿಯ ಬೃಹತ್ ಹಗರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವ ಪ್ರಭಾವಿಗಳ ವಿರುದ್ಧ ಸಿಸಿಬಿ ಕಚೇರಿಗೆ ಮುತ್ತಿಗೆ ಹಾಕಿ ಆರೋಪಿಗಳ ಬಂಧಿಸಲು ಆಗ್ರಹಿಸಲಾಗುವುದು ಎಂದು ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ತಿಳಿಸಿದ್ದಾರೆ.