ವಿಜಯಪಥ ಸಮಗ್ರ ಸುದ್ದಿ
ಬೀದರ್: ಬಸವಕಲ್ಯಾಣ ಕ್ಷೇತ್ರದಲ್ಲೇ ಠಿಕಾಣಿ ಹೂಡಿ ವಾರ ಕಾಲ ಹಳ್ಳಿಹಳ್ಳಿಗೂ ತೆರಳಿ ಪ್ರಚಾರ ನಡೆಸಿದ ದಳಪತಿಗೆ ಮತದಾರ ಕೈಹಿಡಿದ ಹಾಗೇ ಕಾಣುತ್ತಿಲ್ಲ. 7 ಸುತ್ತಿನ ಮತ ಎಣಿಕೆ ಕಾರ್ಯ ಮುಗಿದಿದ್ದು, ಸೈಯದ್ ಯಾಸ್ರಬ್ ಖಾದ್ರಿಗೆ ಲಭಿಸಿದ್ದು, ಕೇವಲ 1418 ಮತಗಳು.
ಹೀಗಾಗಿ ಈ ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಬುಟ್ಟಿಗೆ ಕೈ ಹಾಕಲು ಅಲ್ಪಸಂಖ್ಯಾತ ಅಭ್ಯರ್ಥಿಗೆ ಮಣೆ ಹಾಕುವ ಮೂಲಕ ತಂತ್ರಗಾರಿಕೆ ರೂಪಿಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ತಂತ್ರ ತೀವ್ರ ಹಿನ್ನಡೆ ಅನುಭವಿಸಿದಂತೆ ಕಾಣುತ್ತಿದೆ.
ಈ ವಿಷಯದಲ್ಲಿ ಕಾಂಗ್ರೆಸ್ ಸಾಕಷ್ಟು ಟೀಕೆಗಳನ್ನು ಮಾಡಿತ್ತು. ಬಿಜೆಪಿಗೆ ಲಾಭ ಮಾಡುವುದಕ್ಕಾಗಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಖಾನ್ ನೇರವಾಗಿ ಟೀಕಿಸಿದ್ದರು.
ಇದ್ಯಾವುದನ್ನು ಲೆಕ್ಕಿಸದ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಮುಖಂಡರೊಂದಿಗೆ ಪ್ರಚಾರ ನಡೆಸಿದರು. ಮೈತ್ರಿ ಸರ್ಕಾರದಲ್ಲಿ ಬಸವಕಲ್ಯಾಣದಲ್ಲಿ ಜಾರಿಗೆ ತಂದ ಯೋಜನೆಗಳ ಬಗ್ಗೆ ಸಾಕಷ್ಟು ಪ್ರಚಾರ ನಡೆಸಿದರು ಆದರೂ ಮತದಾರ ಇವರ ಹೇಳಿಕೆಗೆಕಿವಿಯಾಗಿಲ್ಲ ಎಂಬುವುದು ಇಲ್ಲಿ ಸ್ಪಷ್ಟವಾಗುತ್ತಿದೆ.