ಬೆಳಗಾವಿ: ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಕ್ರಮ ಕಂಡುಬಂದ ವಾರ್ಡ್‌ಗಳಲ್ಲಿ ಮರು ಮತದಾನ ನಡೆಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಎಪಿಯ ರಾಜ್ಯ ಸಹ ಸಂಚಾಲಕ ಮೋಹನ್ ದಾಸರಿ, “ಹುಬ್ಬಳ್ಳಿಯ ಕೋಟಿಲಿಂಗ ನಗರ ವಾರ್ಡ್ ನಂ. 52ರಲ್ಲಿ ರಸ್ತೆ ಬದಿಯಲ್ಲೇ ಮತದಾರರಿಗೆ ಹಣ ಹಂಚುತ್ತಿರುವುದು ಕಂಡುಬಂದಿದೆ.
ಘಟನೆಯು ವಿಡಿಯೋದಲ್ಲಿ ಸೆರೆಯಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಬೆಳಗಾವಿಯ ವಾರ್ಡ್ ನಂ. 3ರಲ್ಲಿ ಮಹಿಳೆಯ ಹೆಸರಿನಲ್ಲಿ ಪುರುಷರು ಬೋಗಸ್ ಮತ ಚಲಾಯಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಭಾರೀ ಪ್ರಮಾಣದಲ್ಲಿ ಅಕ್ರಮ ನಡೆಸಿ, ಪ್ರಜಾಪ್ರಭುತ್ವದ ಆಶಯವನ್ನೇ ಬುಡಮೇಲು ಮಾಡಲು ಯತ್ನಿಸುತ್ತಿವೆ” ಎಂದು ಹೇಳಿದರು.
ಅಕ್ರಮವನ್ನು ಚುನಾವಣಾ ಆಯೋಗದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಯಾರೂ ಕೂಡ ಮತದಾನವನ್ನು ಸ್ಥಗಿತಗೊಳಿಸಲು ಮುಂದಾಗಿಲ್ಲ. ಆಯೋಗವು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಕೈಗೊಂಬೆಯಂತೆ ವರ್ತಿಸುತ್ತಿದೆ.
ನೇರವಾಗಿ ಚುನಾವಣೆ ಎದುರಿಸುವ ತಾಕತ್ತಿಲ್ಲದ ಪಕ್ಷಗಳು ಚುನಾವಣಾ ಆಯೋಗದ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುತ್ತಿದ್ದು, ಸೂಕ್ತ ತನಿಖೆ ನಡೆಸಿ ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸದ್ಯ ಅಕ್ರಮ ಕಂಡುಬಂದಿರುವ ಎರಡು ವಾರ್ಡ್‌ಗಳಲ್ಲಿ ಮರುಮತದಾನ ನಡೆಸಬೇಕು ಎಂದು ಮೋಹನ್ ದಾಸರಿ ಆಗ್ರಹಿಸಿದರು.