ಬೆಳಗಾವಿ: ನೀರು ಹಾಯಿಸಲು ಬಾವಿಯ ಮೋಟಾರ್ ಸ್ಟಾರ್ಟ್ ಮಾಡಲು ಹೋದಾಗ ವಿದ್ಯುತ್ ಪ್ರವಹಿಸಿ ಸಹೋದರರಿಬ್ಬರು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಲಜಿ ಗ್ರಾಮದ ಬಡಿಗೇರ ತೋಟದಲ್ಲಿ ನಡೆದಿದೆ.
ಬಾವಿಗೆ ಅಳವಡಿಸಲಾಗಿದ್ದ ನೀರೆತ್ತುವ ಮೋಟಾರ್ ಅನ್ನು ಬೆಳಗ್ಗೆ ಸ್ಟಾರ್ಟ್ ಮಾಡಲು ಹೋಗಿ ರಾಜು ಬಾಳಪ್ಪ ಬಡಿಗೇರ ಹಾಗೂ ಸಹೋದರ ಶಂಕರ್ ರಾಮಪ್ಪ ಬಡಿಗೇರ ಮೃತಪಟ್ಟಿದ್ದಾರೆ. ಮದುವೆ ವಯಸ್ಸಿಗೆ ಬಂದ ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಮಳೆ, ಗಾಳಿಗೆ ವಿದ್ಯುತ್ ತಂತಿಗಳು ಕೆಳಗೆ ನೇತಾಡುತ್ತಿದ್ದು, ಆಕಸ್ಮಿಕವಾಗಿ ವಿದ್ಯುತ್ ಮೋಟಾರ್ ಗೆ ಪ್ರವಹಿಸಿ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಹಾಗೂ ಮೃತ ಸಹೋದರರ ಸಂಬಂಧಿಕರು ತಿಳಿಸಿದ್ದಾರೆ.
ರಾಮ-ಲಕ್ಷ್ಮಣರಂತೆ ಒಂದಾಗೇ ಇರುತ್ತಿದ್ದ ಅಣ್ಣ, ತಮ್ಮನ ಅಕಾಲಿಕ ನಿಧನದಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈ ಕುರಿತು ಕುಡಚಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.