NEWSನಮ್ಮಜಿಲ್ಲೆನಮ್ಮರಾಜ್ಯ

ಲಂಚಾರೋಪದಡಿ ಸೇವೆಯಿಂದ ಬಿಡುಗಡೆಗೊಳಿಸಿ, ಸಾರಿಗೆ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಹುದ್ದೆ ಕೊಟ್ರು: ಏನೂ ತಪ್ಪು ಮಾಡದ ನೌಕರರಿಗೆ ವಜಾ, ಅಮಾನತು ವರ್ಗಾವಣೆ ಶಿಕ್ಷೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರಿಂದ ಲಂಚ ಪಡೆದ ಆರೋಪ ಹೊತ್ತಿರುವ ಅಧಿಕಾರಿಯನ್ನು ಸೇವೆಯಿಂದ ಇದೇ ಆಗಸ್ಟ್‌ 21ರಂದು ತರಾತುರಿಯಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಆದರೆ ಅಂತಹ ಲಂಚಕೋರ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಆ ಅಧಿಕಾರಿಯನ್ನು ಇಂದು (ಆ.30) ಸಾರಿಗೆಯ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಯಾವುದೇ ತಪ್ಪು ಮಾಡದ ಸಾವಿರಾರು ಸಾರಿಗೆ ನೌಕರರನ್ನು ವಿಚಾರಣೆಗೂ ಒಳಪಡಿಸದೆ ಏಕಾಏಕಿ ವಜಾ, ವರ್ಗಾವಣೆ ಮತ್ತು ಅಮಾನತಿನ ಶಿಕ್ಷೆ ನೀಡಿದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಇಂದು ಲಂಚಾರೋಪ ಇರುವ ಅಧಿಕಾರಿಯನ್ನು ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿರುವುದು ಇಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಕಾಣುತ್ತಿದೆ.

ಹೌದು! ಸಕ್ಷಮ ಪ್ರಾಧಿಕಾರಿಗಳ ಆದೇಶದನ್ವಯ ಉಪಮುಖ್ಯ ಕಾನೂನು ಅಧಿಕಾರಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ (ವಿಜಯಪುರ ವಿಭಾಗದ ಧಾರಣಾಧಿಕಾರದಲ್ಲಿರುವವರು) ನಾರಾಯಣಪ್ಪ ಕುರುಬರ ಅವರನ್ನು ಆಡಳಿತಾತ್ಮಕ ಕಾರಣಗಳ ಮೇಲೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಹುದ್ದೆಗೆ ನಿಯಮ 17/1 ರಡಿಯಲ್ಲಿ ಅವರ ಹುದ್ದೆ ಮತ್ತು ವೇತನ ಶ್ರೇಣಿ ಯೊಂದಿಗೆ ಪ್ರತಿನಿಯೋಜಿಸಲಾಗಿದೆ.

ನಾರಾಯಣಪ್ಪ ಕುರುಬರ ಅವರ ನಿಯೋಜನೆಯು ಆಡಳಿತಾತ್ಮಕ ಕಾರಣಗಳ ಮೇರೆಗೆ ಮಾಡಲಾಗಿದ್ದು, ಕಾರ್ಯಸ್ಥಾನದಲ್ಲಿ ಬದಲಾವಣೆ ಇರುವುದರಿಂದ ನಿಯಮಾನುಸಾರ ವರ್ಗಾವಣೆ ಸೌಲಭ್ಯಗಳಿಗೆ ಅರ್ಹರಿರುತ್ತಾರೆ. ನಿಯೋಜನೆಗೊಂಡ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳತಕ್ಕದ್ದು ಎಂದು ಆಗಸ್ಟ್‌ 30ರಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.

ನೋಡಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ನಾರಾಯಣಪ್ಪ ಕುರಬರ ಲಂಚವಿಲ್ಲದೆ ಯಾವುದೇ ಕೆಲಸ ಮಾಡಿಕೊಡುವುದಿಲ್ಲ ಎಂಬ ಆರೋಪವನ್ನು ನೌಕರರೆ ಮಾಡಿದ್ದು ಆ ಬಗ್ಗೆ ಅಡಿಯೋ ಮತ್ತು ವಿಡಿಯೋಗಳು ಇವೆ.

ಆದರೂ ಅಂಥ ಅಧಿಕಾರಿಯನ್ನು ಅಮಾನತಿನಲ್ಲಿಟ್ಟು ವಿಚಾರಣೆ ಮಾಡದೆ ಅವರನ್ನು ಮತ್ತೊಂದು ಸ್ಥಳಕ್ಕೆ ಅದೂ ಕಾರ್ಮಿಕರ ಮುಖ್ಯ ಕಲ್ಯಾಣಾಧಿಕಾರಿಯಾಗಿ ನೇಮಕ ಮಾಡಿರುವುದು ಎಷ್ಟು ಸರಿ ಎಂದು ನೌಕರರು ಆತಂಕದಿಂದಲೇ ಕೇಳುತ್ತಿದ್ದಾರೆ.

ನಮ್ಮಿಂದಲೇ ಲಂಚ ಪಡೆಯುವ ಅಧಿಕಾರಿ ಕಾರ್ಮಿಕರಾದ ನಮ್ಮ ಕಷ್ಟಗಳನ್ನು ಕೇಳುತ್ತಾರೆಯೇ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಒಬ್ಬ ಅಧಿಕಾರಿ ಮೇಲೆ ಲಂಚಾರೋಪ ಕೇಳಿ ಬಂದರೂ ಅವರನ್ನು ಅಮಾನತು ಮಾಡದಿರುವುದು ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ.

ಇಂಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೆ ಅವರನ್ನು ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿಯಾಗಿ ನೇಮಕ ಮಾಡಲು ಆದೇಶಿಸಿದ್ದಾರೆ ಎಂದರೆ ಏನು ಅರ್ಥ.

ಯಾವುದೇ ತಪ್ಪು ಮಾಡದೆ ಕಳೆದ ಏಪ್ರಿಲ್‌ನಿಂದ ವಜಾ, ವರ್ಗಾವಣೆ ಮತ್ತು ಅಮಾನತಿನ ಶಿಕ್ಷೆ ಕೊಟ್ಟಿದ್ದೀರಲ್ಲ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರೆ ಆ ನೌಕರರ ಜತೆ ಒಮ್ಮೆಯಾದರೂ ಮಾತನಾಡಿದ್ದೀರ ಅವರು ಏನು ತಪ್ಪು ಮಾಡಿರುವುದಕ್ಕೆ ನೀವು ಶಿಕ್ಷೆ ಕೊಟ್ಟಿದ್ದೀರಿ ಎಂಬುದನ್ನು ನಮಗೂ ಸ್ವಲ್ಪ ಹೇಳುತ್ತೀರಾ?

ನಿಮ್ಮ ಈ ಇಬ್ಬಗೆಯ ನಡೆ ಸಮ ಸಮಾಜದಲ್ಲಿ ಅದರಲ್ಲೂ ಇಂಥ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ದೇಶದಲ್ಲಿ ಸರಿಯಲ್ಲ. ಮೊದಲು ವಜಾ, ವರ್ಗಾವಣೆ ಮತ್ತು ಅಮಾನತುಗೊಂಡವರ ಬಗ್ಗೆಯೂ, ಈಗ ನೀವು ಲಂಚ ಆರೋಪ ಹೊತ್ತ ಅಧಿಕಾರಿಯ ಬಗ್ಗೆ ನಡೆದುಕೊಂಡಂತೆ ನಡೆದುಕೊಳ್ಳಬೇಕಿದೆ.

ಇಲ್ಲದಿದ್ದರೆ ನೀವು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಹುದ್ದೇಗೆ ಅವಮಾನ ಮಾಡಿದಂತಾಗುತ್ತದೆ. ನಿಷ್ಠೆಯಿಂದ ದುಡಿದು ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಿಮಗಿಂತ ಹೆಚ್ಚಾಗಿ ಹೊರುತ್ತಿರುವ ಈ ನೌಕರರ ವಿರುದ್ಧ ನಿಮ್ಮ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಜನಸಾಮಾನ್ಯರು ಹೇಳುವಂತಾಗಿರುವುದು ದುರದೃಷ್ಟಕರ ಸಂಗತಿ.

ಇನ್ನಾದರೂ ಇತ್ತ ರಾಜ್ಯದ ಮುಖ್ಯಮಂತ್ರಿಳು ಮತ್ತು ಈಗ ಸಾರಿಗೆ ಸಂಸ್ಥೆಯ ಯಜಮಾನರಾಗಿರುವ ಸಚಿವ ಬಿ.ಶ್ರೀರಾಮುಲು ಅವರು ಗಮನಹರಿಸಿ ತಪ್ಪು ಮಾಡಿದವರನ್ನು ಕಾನೂನು ರೀತಿ ಶಿಕ್ಷೆಗೆ ಒಳಪಡಿಸಿ, ಕೆಲಸ ಕಳೆದುಕೊಂಡಿರುವ ಪ್ರಾಮಾಣಿಕ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡು ನಮ್ಮ ಸಂವಿಧಾನಾತ್ಮಕ ಕಾನೂನನ್ನು ಗೌರವಿಸಿ ಎಂಬುವುದು ನಮ್ಮ ಬಲವಾದ ಆಗ್ರಹವಾಗಿದೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು