ವಿಜಯಪಥ ಸಮಗ್ರ ಸುದ್ದಿ
ಮೈಸೂರು: ರಾಜ್ಯದಲ್ಲಿ ಕೊರೊನಾ ಮಹಾ ಮಾರಿಯಿಂದ ಬಿಗಡಾಯಿಸುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಆಡಳಿತ ಪಕ್ಷದೊಂದಿಗೆ ಕೈಜೋಡಿಸಲು ಕಾಂಗ್ರೆಸ್ ಆಂಬ್ಯುಲೆನ್ಸ್ ಸೇವೆ ಕಲ್ಪಿಸಿದೆ ಎಂದು , ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣ್ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ನೆರವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ `ಕಾಂಗ್ರೆಸ್ ಕೇರ್ಸ್’ನಡಿ ಎರಡು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದ್ದುಈ ಆಂಬುಲೆನ್ಸ್ ಸೇವೆಗೆ ಬುಧವಾರ ನಗರದ ಕಾಂಗ್ರೆಸ್ ಕಚೇರಿಯ ಮುಂಭಾಗ ಪಕ್ಷದ ಬಾವುಟ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಾಂಗ್ರೆಸ್‌ನ ಕೊರೊನಾ ಸಹಾಯವಾಣಿಗೆ ಬರುವ ಕರೆಗಳಿಗೆ ಸ್ಪಂದಿಸಲು ಇವುಗಳನ್ನು ಬಳಸಿಕೊಳ್ಳಲಾಗುತ್ತದೆ. ಇನ್ನೆರಡು ದಿನಗಳಲ್ಲಿ ಚಾಮರಾಜನಗರಕ್ಕೂ ಆಂಬುಲೆನ್ಸ್ ವ್ಯವಸ್ಥೆ ಮಾಡಲಿದ್ದೇವೆ ಎಂದರು.
ಕೇರಳದಲ್ಲಿ ಅಂದಿನಿಂದ ಈಗಿನವರೆಗೂ ಕೊರೊನಾ ನಿರ್ವಹಣೆ ಅದ್ಭುತವಾಗಿದೆ. ಆರೋಗ್ಯ ಮಂತ್ರಿ ಶೈಲಜಾ ಅವರ ಕಾರ್ಯ ಮೆಚ್ಚುವಂತಹದ್ದು. ಅಲ್ಲಿ ಈಗಲೂ ಆಕ್ಸಿಜನ್ ಕೊರತೆ ಇಲ್ಲ. ಆದ್ದರಿಂದಲೇ ಈ ಬಾರಿಯೂ ಅಲ್ಲಿ ಅವರ ಪಕ್ಷ ಜಯಗಳಿಸಿತು. ಆದರೆ ಇಲ್ಲಿನ ರಾಜಕಾರಣಿಗಳು ಚುನಾವಣೆ, ಅಧಿಕಾರದ ಬಗ್ಗೆ ಚಿಂತಿಸುತ್ತಿದ್ದರು. ಕೇರಳದವರ ಕಾರ್ಯವೈಖರಿ ನಮಗೆ ಮಾದರಿಯಾಗಬೇಕು ಎಂದು ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ ಕೊರೊನಾ ಸೋಂಕಿತ 24 ಮಂದಿ ಮೃತಪಟ್ಟಿದ್ದಕ್ಕೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರ್‌ನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಹರೀಶ್ ಗೌಡ, ಮುಖಂಡರಾದ ಅಶೋಕ್, ಅರವಿಂದ್, ಶಿವಣ್ಣ, ಕೃಷ್ಣೇಗೌಡ ಮತ್ತಿತರರು ಇದ್ದರು.