ವಿಜಯಪಥ ಸಮಗ್ರ ಸುದ್ದಿ
ತಿ. ನರಸೀಪುರ: ಹಸಿದ ಹೊಟ್ಟೆಯಲ್ಲೇ ಕಾರ್ಮಿಕನೊಬ್ಬ 300 ಕಿ.ಮೀ. ಸೈಕಲ್ ತುಳಿದುಕೊಂಡೆ 10 ವರ್ಷದ ಮಾನಸಿಕ ಪುತ್ರನಿಗೆ ಔಷಧ ತಂದುಕೊಟ್ಟಿದ್ದಾರೆ.
ತಿ. ನರಸೀಪುರ ತಾಲೂಕು ಬ್ನನೂರು ಹೋಬಳಿಯ ಗಾಣಿಗನಕೊಪ್ಪಲು ಗ್ರಾಮದ ಆನಂದ್ (45) ಎಂಬುವವರು ತನ್ನ ಹತ್ತು ವರ್ಷದ ಪುತ್ರನಿಗಾಗಿ ಬೆಂಗಳೂರಿನ ನಿಮ್ಹಾನ್ಸ್‌ಗೆ ಸೈಕಲ್‌ನಲ್ಲಿ ಹೋಗಿ ಬಂದಿದ್ದಾರೆ.
ಪುತ್ರನಿಗೆ ಅಗತ್ಯವಿರುವ ಔಷಧ ಸ್ಥಳೀಯವಾಗಿ ಎಲ್ಲಿಯೂ ಸಿಗಲಿಲ್ಲ. ಬೆಂಗಳೂರಿಗೆ ಹೋದಾಗಲೆಲ್ಲಾ ಎರಡು ತಿಂಗಳಿಗಾಗುವಷ್ಟು ಔಷಧ ತರುತ್ತಿದ್ದರು.
ಆದರೆ, ಲಾಕ್‌ಡೌನ್ ಇರುವ ಕಾರಣ ಇತ್ತೀಚೆಗೆ ಬೆಂಗಳೂರಿಗೆ ಹೋಗಲಾಗಲಿಲ್ಲ. ಇತ್ತ ಪುತ್ರನ ಔಷಧವೂ ಮುಗಿಯುತ್ತ ಬಂದಿತ್ತು. ಇದರಿಂದ ಆತಂಕಗೊಂಡ ಆನಂದ್ ಔಷಧಿ ತರುವಂತೆ ಪರಿಚಯಸ್ಥರನ್ನು ಕೇಳಿದ್ದಾರೆ. ಆದರೆ ಅವರು, ನೆರವಿಗೆ ಬಂದಿಲ್ಲ. ಆಗ ಆನಂದ್ ವಿಧಿ ಇಲ್ಲದೆ ಮೇ 23ರಂದು ಬನ್ನೂರು- ಮಳವಳ್ಳಿ- ಕನಕಪುರ ಮಾರ್ಗವಾಗಿ ಬೆಂಗಳೂರು ತಲುಪಿದ್ದಾರೆ.
ನಡುವೆ ಹಸಿದ ಹೊಟ್ಟೆಯಲ್ಲಿ ಕಂಗೆಟ್ಟಿದ್ದ ಆನಂದ್ ಕನಕಪುರದ ದೇವಾಲಯವೊಂದರಲ್ಲಿ ತಂಗಿ ರಾತ್ರಿ 10 ಗಂಟೆಗೆ ಬನಶಂಕರಿಗೆ ತಲುಪಿ ಅಪರಿಚಿತರ ಬಳಿ ತಮ್ಮ ಕಷ್ಟ ಹೇಳಿಕೊಂಡರು. ಇದರಿಂದ ಮರುಗಿದ ಅವರು ಉಳಿಯಲು ಸ್ಥಳ ಹಾಗೂ ಊಟದ ವ್ಯವಸ್ಥೆ ಮಾಡಿದ್ದಾರೆ.
ಇನ್ನು ಬೆಳಗ್ಗೆ ಎದ್ದು ನಿಮ್ದಾನ್ಸ್‌ಗೆ ತೆರಳಿ ಔಷಧ ತೆಗೆದುಕೊಂಡಾಗ ಆನಂದ್ ತಾವು ಸೈಕಲ್‌ನಲ್ಲಿ ಆಸ್ಪತ್ರೆಗೆ ಬಂದಿದ್ದಾಗಿ ವೈದ್ಯರ ಬಳಿ ಹೇಳಿಕೊಂಡಿದ್ದಾರೆ.ಇವರ ಕಷ್ಟ ಆಲಿಸಿದ ವೈದ್ಯರು ಮರುಗಿದ್ದು, ಆನಂದ್‌ಗೆ ಒಂದು ಸಾವಿರ ರೂಪಾಯಿ ಕೊಟ್ಟು ಕಳುಹಿಸಿದ್ದಾರೆ.
ನಿಮ್ದಾನ್ಸ್‌ನಿಂದ ಬೆಳಗ್ಗೆ 10 ಗಂಟೆಗೆ ಮತ್ತೆ ನರಸೀಪುರದತ್ತ ಪ್ರಯಾಣ ಬೆಳೆಸಿದ ಆನಂದ್ ಸಂಜೆ 4ಗಂಟೆಗೆ ಊರು ತಲುಪಿದ್ದಾರೆ. ಕೊರೊನಾದ ಈ ಸಂಕಷ್ಟದಲ್ಲೂ ತನ್ನ ಮಗನಿಗೆ ಔಷಧ ತರಲು ಸೈಕಲ್‌ನಲ್ಲೇ ಹೋಗಿದ್ದಕ್ಕೆ ವೈದ್ಯರು ಮರುಕ ವ್ಯಕ್ತಪಡಿಸಿ ಹಣವನ್ನೂ ನೀಡಿರುವುದು ಅವರ ಮಾನವೀಯತೆಗೆ ಸಾಕ್ಷಿ ಎಂದು ಆನಂದ್ ತಿಳಿಸಿದ್ದಾರೆ.