ಬೆಂಗಳೂರು: ಸಾರಿಗೆ ಡಿಪೋಗಳಲ್ಲಿ ಕೆಲಸ ಮಾಡುವ ನೌಕರರಿಗೆ ಕಿರುಕುಳ ನೀಡಿದರೆ ಅಂಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವ ಜತೆಗೆ ನೌಕರರಿಗೆ ಆಗುವ ತೊಂದರೆಯ ಹೊಣೆಯನ್ನು ನಾನೆ ಹೊರುತ್ತೇನೆ ಎಂದು ಸಚಿವ ಶ್ರೀರಾಮುಲು ಅಭಯನೀಡಿದ್ದಾರೆ.
ಇಂದು ಆಯೋಜಿಸಿದ್ದ ಸಾರಿಗೆ ನೌಕರರ ಸಂಘಟನೆಗಳ ಪದಾಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಸಾರಿಗೆ ನೌಕರರ ಎಲ್ಲ ಸಮಸ್ಯೆ, ಬೇಡಿಕೆಗಳನ್ನು ಬಗೆಹರಿಸುತ್ತೇನೆ. ಸ್ವತಃ ನಾನೇ ಡಿಪೋಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಎಲ್ಲದರ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ತಿಳಿಸಿದರು.
ಇನ್ನು ಮುಂದಿನ ದಿನಗಳಲ್ಲಿ ಸಾರಿಗೆ ನೌಕರರ ಸಂಘಟನೆಗಳ ಚುನಾವಣೆ ನಡೆಸಬೇಕು ಎಂಬ ಬಗ್ಗೆ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ಆ ಬಗ್ಗೆ ನಾನು ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಇನ್ನು ಪ್ರಮುಖವಾಗಿ ಬಿಎಂಟಿಸಿಯಲ್ಲಿ ವರ್ಗಾವಣೆ, ವಜಾ, ಅಮಾನತು ಆಗಿರುವ ಎಲ್ಲ ನೌಕರರನ್ನು 10ದಿನದೊಳಗೆ ಮತ್ತೆ ಮಾತೃ ಘಟಕಕ್ಕೆ ಕಳುಹಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ ಸಚಿವರು, ಎಲ್ಲ ಪೊಲೀಸ್ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿಯೂ ತಿಳಿಸಿದರು.
ಸಚಿವರು ಕೊಟ್ಟ ಸಿಹಿ ಸುದ್ದಿಯನ್ನು ಕೇಳಿದ ನೌಕರರು ಅಭಿನಂದನೆಗಳನ್ನು ಸಾಮಾಜಿಕ ಜಾಲತಾಣದ ತಮ್ಮ ತಮ್ಮ ಪೇಜ್‌ಗಳಲ್ಲಿ ಸಲ್ಲಿಸುತ್ತಿದ್ದಾರೆ. ಈ ಮೂಲಕ ಕಳೆದ 5ತಿಂಗಳಿನಿಂದ ಏನು ನಿಗಮಗಳಲ್ಲಿ ಏರ್ಪಟ್ಟಿತ್ತೋ ಆ ಸಮಸ್ಯೆಗಳಿಗೆ ಬಹುತೇಕ ತೆರೆ ಬಿದ್ದಂತಾಗಿದೆ.