ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಕೋವಿಡ್ ನಿಂದ ಮೃತಪಟ್ಟವರು ಸೇರಿದಂತೆ ಅನೇಕ ವಿಚಾರಗಳಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸುಳ್ಳು ಮಾಹಿತಿ ನೀಡುತ್ತಿದ್ದು, ಅವರ ವಿರುದ್ಧ ತನಿಖೆಗೆ ಆದೇಶ ನೀಡಬೇಕು ಎಂದು ಸರ್ಕಾರವನ್ನು ಮಾಜಿ ಸಚಿವ ಸಾ.ರಾ.ಮಹೇಶ್ ಆಗ್ರಹಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರೊನಾದಿಂದ ಮೃತಪಟ್ಟವರ ಸಂಖ್ಯೆಯನ್ನೇ ಜಿಲ್ಲಾಧಿಕಾರಿ ಸರ್ಕಾರಕ್ಕೆ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಡಿಸಿ ವಿರುದ್ಧ ಕೂಡಲೇ ತನಿಖೆಗೆ ಆದೇಶ ಮಾಡಬೇಕು ಎಂದರು.
ಸತ್ಯ ವರದಿ ಮಾಡಿದ್ದರೆ ಮುಖ್ಯಮಂತ್ರಿ, ಸಚಿವರು ಅಥವಾ ಯಾರಾದರೂ ಮೈಸೂರಿಗೆ ಏನು ಕೆಲಸ ಆಗಬೇಕು ಅದನ್ನು ಮಾಡುತ್ತಿದ್ದರು. ಈ ಎಲ್ಲಾ ದಾಖಲೆಗಳನ್ನೂ ನಾನು ಮಾನವ ಹಕ್ಕು ಆಯೋಗ, ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡುತ್ತೇನೆ ಎಂದು ತಿಳಿಸಿದರು.
ಭಾನುವಾರ ಕೆ.ಆರ್.ನಗರದಲ್ಲಿ ಶೂನ್ಯ ಸಾವಾಗಿದೆ ಅಂತ ಲೆಕ್ಕ ತೋರಿಸಿದ್ದಾರೆ. ಆದರೆ, ನನ್ನ ಗಮನಕ್ಕೆ ಬಂದಂತೆ ಚಿಕ್ಕನಾಯಕನಹಳ್ಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ಮಾಡಲಾಗಿದೆ. ಯಾಕೆ ಸಾವುಗಳನ್ನು ಮುಚ್ಚಿಡುತ್ತಿದ್ದೀರಿ? ಯಾಕೆ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಲೆಕ್ಕ ಕೊಡುತ್ತಿಲ್ಲ. ನಿಮಗೆ ಮಾನವೀಯತೆ, ಮನುಷ್ಯತ್ವ, ತಾಯಿ ಹೃದಯ ಇಲ್ವ, ಸರ್ಕಾರವನ್ನೂ ಯಾಕೆ ದಿಕ್ಕು ತಪ್ಪಿಸುತ್ತಿದ್ದೀರಿ. ಇದು ಸತ್ತ ಕುಟುಂಬಸ್ಥರ ಮಾನವ ಹಕ್ಕುಗಳ ಉಲ್ಲಂಘನೆ ಅಲ್ವ ಎಂದು ಪ್ರಶ್ನಿಸಿದರು.
ಜಿಲ್ಲಾಡಳಿತ ಸಾವಿನಲ್ಲೂ ಸುಳ್ಳು ಲೆಕ್ಕ ಕೊಡುತ್ತಿದೆ. ಮೈಸೂರಿನಲ್ಲಿ ಮೇ ತಿಂಗಳಲ್ಲಿ ಮೃತಪಟ್ಟವರು 969. ಆದರೆ, ಸರ್ಕಾರಕ್ಕೆ ಲೆಕ್ಕ ಕೊಟ್ಟಿರುವುದು 238. ವಿಜಯನಗರದ ಮುಕ್ತಿದಾಮದಲ್ಲಿ ಅಂತ್ಯಕ್ರಿಯೆ ನಡೆಸಿದ ಸಂಖ್ಯೆಯ ಪಟ್ಟಿ ಬಿಡುಗಡೆ ಮಾಡಿ ಎಂದು ಹೇಳಿದರಲ್ಲದೇ, ಈ ರೀತಿ ಲೆಕ್ಕ ಕೊಡೋಕೆ ಐಎಎಸ್ ಯಾಕೆ ಬೇಕು? ಎಸ್ಎಸ್ಎಲ್‌ಸಿ ಓದಿದವರೂ ಕೊಡಬಹುದು ಎಂದು ವಾಗ್ದಾಳಿ ನಡೆಸಿದರು.
ಸಾವಿನ ಲೆಕ್ಕದ ಸಮಗ್ರ ತನಿಖೆಯಾಗಬೇಕು. ಅಧಿಕಾರಿ ಮೇಲೆ ಕ್ರಮ ತೆಗೆದುಕೊಳ್ಳುವುದು ನಿಮಗೆ ಬಿಟ್ಟಿದ್ದು. ನಾನು ಇವರನ್ನು ಬದಲಾಯಿಸಿ ಅಂತ ಕೇಳುವುದಿಲ್ಲ. ಇಲ್ಲಿಂದ ಹೋಗಿ ಬೇರೆ ಕಡೆಯೂ ಗೋಳು ಹೂಯ್ದುಕೊಳ್ಳಲಿ ಅಂತನಾ? ಅವರ ಮಂಡ್ಯ ಇತಿಹಾಸ ಗೊತ್ತಿಲ್ಲವಾ? ಹಾಸನದ ಇತಿಹಾಸ ಗೊತ್ತಿಲ್ಲವಾ? ಅಧಿಕಾರಿಗಳು ಏನೇ ಮಾಡಿದರೂ ನಂಬುತ್ತಾರೆ. ರಾಜಕಾರಣಿಗಳು ಸತ್ಯ ಹೇಳಿದರು ನಂಬುವುದಿಲ್ಲ. ಜನಪ್ರತಿನಿಧಿಗಳು 5 ವರ್ಷಕ್ಕೆ ಒಂದೊಂದು ಐಎಎಸ್ ಮಾಡಿದಂತೆ ಎಂದು ಹೇಳಿದರು.
ಸಾವಿನ ಸಂಖ್ಯೆ ಇಳಿಸಿದ್ದೇವೆ, ಮೈಸೂರಿನಲ್ಲಿ ನಾನು ಸಾಧನೆ ಮಾಡಿದ್ದೇನೆ ಅಂತ ತೋರಿಸಿಕೊಳ್ಳುತ್ತಿದ್ದಾರೆ. ಪರೀಕ್ಷೆ ಕಡಿಮೆ ಮಾಡಿದ ಪರಿಣಾಮ ಪ್ರಕರಣ ಕಡಿಮೆ ಆಗಿದೆ. ಈ ವಿಚಾರವನ್ನು ನಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅವರ ಸೂಚನೆ ಬಳಿಕ 8000 ಟೆಸ್ಟಿಂಗ್ ಶುರುವಾಗಿದೆ. ನಗರದಲ್ಲಿ ಮೃತಪಟ್ಟಿರುವ ಸಂಖ್ಯೆಯ ದಾಖಲೆ ತೆಗೆಸಿದ್ದೇನೆ. ಇನ್ನು ಮೈಸೂರು ಜಿಲ್ಲೆಯಲ್ಲಿ ಎಷ್ಟು ಸಾವಿರ ಜನ ಸತ್ತಿದ್ದಾರೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಅದರ ಮಾಹಿತಿಯನ್ನೂ ತರಿಸುತ್ತೇನೆ. ಸತ್ತ ಕುಟುಂಬಗಳಿಗೂ ಯಾವುದಾದರೂ ರೂಪದಲ್ಲಿ ಸಹಾಯ ಆಗಬೇಕಲ್ವ ಎಂದರು.
ಡಿಸಿ ರೋಹಿಣಿ ತಮ್ಮ ಸಾರ್ವಜನಿಕ ಸೇವೆಯ ಎಲ್ಲವೂ ಇದೇ ರೀತಿ ಮೋಸದ್ದು. ರಾಜ್ಯ ಸರ್ಕಾರ ಸಿಎಂ, ರಾಜ್ಯಪಾಲರು ಹಾಗೂ ಸತ್ತವರ ಕುಟುಂಬಕ್ಕೆ ಸತ್ತವರ ಆತ್ಮಕ್ಕೆ ತಪ್ಪು ಲೆಕ್ಕ ಕೊಟ್ಟಿದ್ದಾರೆ. ಇದಕ್ಕಿಂತ ದಾಖಲಾತಿ ಬೇಕು ಅಂದರೆ ಸತ್ತವರ ಮನೆಗೆ ಹೋಗೋಣ. ಇಲ್ಲ ಅಂತ್ಯಕ್ರಿಯೆ ಮಾಡಿದವರ ಬಳಿ ಹೋಗೋಣ ಎಂದ ಅವರು, ಇಲ್ಲಿಗೆ ಕಳಂಕ ರಹಿತ ಅಧಿಕಾರಿ ಬೇಕು ಎಂದು ಹೇಳಿದರು.