ಬೆಂಗಳೂರು ಗ್ರಾಮಾಂತರ : ಜೆಡಿಎಸ್ಗೆ ಸಂಪೂರ್ಣ ಬಹುಮತ ನೀಡಿದರೆ 5 ವರ್ಷಗಳಲ್ಲಿ ರಾಜ್ಯದಲ್ಲಿ ಕಾಂತ್ರಿಕಾರಿ ಬೆಳವಣಿಗೆ ತಂದು ದೇಶವೇ ನಮ್ಮ ರಾಜ್ಯದತ್ತ ತಿರುಗಿ ನೋಡುವಂತೆ ಅಭಿವೃದ್ದಿ ಪರ ರಾಜ್ಯ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿ ಕೆಂಗಲ್ ಗ್ರಾಮದಲ್ಲಿ ಆಯೋಜಿಸಿದದ ಶ್ರೀ ಲಕ್ಷ್ಮಿವೆಂಕಟೇಶ್ವರಸ್ವಾಮಿ ಮತ್ತು ಶ್ರೀ ಕೃಷ್ಣ- ರುಕ್ಮಿಣಿಯ ಜೀರ್ಣೋದ್ಧಾರಗೊಂಡ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ನಾನು ರಾಜಕೀಯಕ್ಕೆ ಬಂದದ್ದು ಆಕಸ್ಮಿಕ. ಅಧಿಕಾರದಲ್ಲಿದ್ದಾಗ ಜನರಿಗೆ ಮೋಸ ಮಾಡಲಿಲ್ಲ. ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಮೈತ್ರಿ ಸರ್ಕಾರ ನನಗೆ ಸಹಕಾರ ನೀಡಿತ್ತು. ಆದರೆ, ಎರಡನೇ ಬಾರಿ ಮುಖ್ಯಮಂತ್ರಿಯಾದ ಸಂದರ್ಭ ಮೈತ್ರಿ ಸರ್ಕಾರದಿಂದ ನನಗೆ ಸಹಕಾರ ದೊರೆಯಲಿಲ್ಲ. ಇಲ್ಲಸಲ್ಲದ ಕಷ್ಟಗಳನ್ನು ನೀಡಿದರು ಎಂದು ಬೇಸರ ವ್ಯಕ್ತಪಡಿಸಿದರು.
ಸಾಲ ಮನ್ನಾದಿಂದ ರೈತರ ಕಷ್ಟಗಳು ಶಾಶ್ವತವಾಗಿ ಬಗೆಹರಿಯುವುದಿಲ್ಲ. ರೈತರು ಸಾಲಗಾರರಾಗದೆ ಇರುವ ಹಾಗೆ ಸರ್ಕಾರ ಚಿಂತನೆ ಮಾಡಬೇಕಾದ ಅನಿವಾರ್ಯತೆ ಇದೆ. ಸ್ವಾತಂತ್ರ್ಯ ಬಂದು 75 ವರ್ಷ ಆದರೂ ಇನ್ನೂ ರೈತರ ಸಮಸ್ಯೆಗಳು ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ ಹಲವು ಯೋಜನೆಗಳನ್ನು ಈಗಿನ ಸರ್ಕಾರ ಸ್ಥಗಿತಗೊಳಿಸಿದ್ದು, ಜನರು ಸಂಕಷ್ಟ ಅನುಭವಿಸುವಂತೆ ಮಾಡಿದೆ ಎಂದರು.