ಹಾವೇರಿ: ಎಸಿಬಿ ಅಧಿಕಾರಿಗಳು ಭ್ರಷ್ಟರ ವಿರುದ್ಧ ದಾಳಿ ಮಾಡುತ್ತಿರುವುದನ್ನೇ ಬಂಡವಾಳ ಮಾಡಿಕೊಂಡ ಆಸಾಮಿಯೊಬ್ಬ ತಾನು ಎಸಿಬಿ ಅಧಿಕಾರಿ ಎಂದು ಹೇಳಿಕೊಂಡು ಜಿಲ್ಲೆಯ ರಾಣೆಬೆನ್ನೂರು ನಗರಸಭೆ ಅಧಿಕಾರಿಗಳನ್ನು ವಂಚನೆ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರಿನ ಹಲಸೂರು ನಿವಾಸಿ ಜಾನಮೇಕ್ ಅಲಿಯಾಸ್ ಜಾನ್ ಮ್ಯಾಥ್ಯೂ ಪೊಲೀಸರ ಕೈಗೆ ಸಿಕ್ಕು ಜೈಲು ಸೇರಿದ ನಕಲಿ ಎಸಿಬಿ ಅಧಿಕಾರಿ.
ಏನು ನಡೆಯಿತು: ರಾಣೆಬೆನ್ನೂರು ನಗರಸಭೆಯ ಆಯುಕ್ತ ಉದಯಕುಮಾರ್ ತಳವಾರರ ಬಳಿ ಜಾನಮೇಕ್ ಬಂದಿದ್ದಾನೆ. ಈ ವೇಳೆ ನಗರಸಭೆ ಕಚೇರಿಯಲ್ಲಿ ಇಂಜಿನಿಯರ್ ಮಹೇಶ್ ಗುಡಿಸಲಮನಿ ಅವರ ಹೆಸರು ಎಸಿಬಿ ಅಧಿಕಾರಿಗಳ ದಾಳಿ ಮಾಡುವ ಲಿಸ್ಟ್‌ನಲ್ಲಿದೆ ಎಂದು ಹೆದರಿಸಿದ್ದಾನೆ.
ಆಗ ಜಾನಮೇಕ್ ನೀವು ಹಣ ನೀಡಿದರೆ ನಮ್ಮ ಮೇಲಿನ ಎಸಿಬಿ ಅಧಿಕಾರಿಗಳಿಗೆ ಹೇಳಿ ಅವರ ಹೆಸರನ್ನು ಆ ಲಿಸ್ಟ್‌ನಿಂದ ತೆಗೆಸುತ್ತೇನೆ ಎಂದು ಹೇಳಿ ಹಣ ಪಡೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಅನುಮಾನಗೊಂಡ ಉದಯಕುಮಾರ್ ಜಾನಮೇಕ್ ನಕಲಿ ಎಸಿಬಿ ಅಧಿಕಾರಿ ಎಂಬುದನ್ನು ಅರಿತು ತಕ್ಷಣವೇ ರಾಣೆಬೆನ್ನೂರು ನಗರ ಠಾಣೆಯ ಪೊಲೀಸರ ಗಮನಕ್ಕೆ ತಂದು ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಜಾನಮೇಕ್‌ನನ್ನು ಬಂಧಿಸಿದ್ದಾರೆ. ಬಂಧಿತನ ಮೇಲೆ ಐಪಿಸಿ ಸೆಕ್ಷನ್ 385, 418, 419, 420, 511 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಲ್ಲದೇ ಬಂಧಿತ ಆರೋಪಿ ಜಾನಮೇಕ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ವಿರುದ್ಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.