ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ವಸ್ತು ಸ್ಥಿತಿ ಹಾಗೂ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣ ಕುರಿತಾಗಿ ಅಧ್ಯಯನ ನಡೆಸಿ ಮೂರು ತಿಂಗಳ ಒಳಗಡೆ ವರದಿ ನೀಡಲು ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಸರ್ಕಾರ ಸಮಿತಿ ರಚಿಸಿದೆ.
ಈ ಕುರಿತು ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದ್ದು, ಕೆಎಸ್‍ಆರ್ ಟಿಸಿ, ವಾಯುವ್ಯ ಸಾರಿಗೆ ಸಂಸ್ಥೆ, ಬಿಎಂಟಿಸಿ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ನಿಗಮಗಳಲ್ಲಿ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣ ಕುರಿತಾಗಿ ಮೂರು ತಿಂಗಳೊಳಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ.
ನಷ್ಟದಲ್ಲಿ ಸಾಗುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ಸಾರಿಗೆ ನಿಗಮ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ನಿಗಮಗಳ ಪುನರ್ ನಿರ್ಮಾಣಕ್ಕೆ ಹಲವು ಸುಧಾರಣೆಗಳನ್ನು ತರಲು ಸಮಿತಿ ರಚಿಸಲಾಗಿದೆ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ತಿಳಿಸಿದ್ದರು.
ಅದಂತರ ಸಮಿತಿ ರಚಿಸಿದ್ದು ಆ ಸಮಿತಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕೆಎಸ್‌ಆರ್‌ಟಿಸಿ ಎಂಡಿಗಳು ಒದಗಿಸಿಕೊಡಬೇಕು. ಜತೆಗೆ ಸಮಿತಿ ಕೇಳುವ ಎಲ್ಲ ಮಾಹಿತಿಯನ್ನು ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದರೆ, ಸಮಿತಿ ವರದಿ ಸಲ್ಲಿಕೆಗೆ ಮೂರು ತಿಂಗಳ ಗಡುವು ನೀಡಿದ್ದು, ಅದರ ವರದಿ ಆದರಿಸಿ ನೌಕರರ ಸಮಸ್ಯೆ, ಸಂಸ್ಥೆಯನ್ನು ಲಾಭದತ್ತ ತೆಗೆದುಕೊಂಡು ಹೋಗುವ ಬಗ್ಗೆ ಸರ್ಕಾರ ಹೊರಟಿರುವುದು ಒಳ್ಳೆಯ ಬೆಳವಣಿಗೆ.
ಆದರೆ, ಈಗ ಮುಷ್ಕರದ ಸಮದಲ್ಲಿ ಅಮಾಯಕರ ಮೇಲೆ ವಜಾಸ್ತ್ರ ಹೂಡಿರುವುದನ್ನು ವಾಪಸ್ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ಅತೀ ಶೀಘ್ರ ಕ್ರಮ ಕೈಗೊಳ್ಳಬೇಕಿದೆ.