ಬೆಂಗಳೂರು: ನೂರಾರು ಕೆರೆಗಳನ್ನು ನಿರ್ಮಾಣ ಮಾಡಿ, ವ್ಯಾಪಾರ ವಹಿವಾಟಿಗೆ ಅನೇಕ ಪೇಟೆಗಳನ್ನು ಕಟ್ಟಿ, ಅತ್ಯಂತ ಯೋಜನಾಬದ್ಧವಾಗಿ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರ ಸಂಸ್ಮರಣೆಗಳ ಜೊತೆಗೆ, ಆ ಧೀಮಂತ ಆಡಳಿತಗಾರನಿಗೆ ಶ್ರದ್ಧಾಪೂರ್ವಕ ಪ್ರಣಾಮಗಳನ್ನು ಸಲ್ಲಿಸೋಣ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಈ ವೇಳೆ ಎಲ್ಲರಿಗೂ ನಾಡಪ್ರಭು ಕೆಂಪೇಗೌಡರ 512ನೇ ಜಯಂತಿಯ ಹಾರ್ದಿಕ ಶುಭಾಶಯಗಳನ್ನು ಟ್ವೀಟ್ ಮೂಲಕ ಕೋರಿದ್ದಾರೆ.
ಇನ್ನು ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಇಂದು ಸರಳವಾಗಿ ಆಚರಿಸ ಸಲಹೆ ನೀಡಿದೆ.
ಹೀಗಾಗಿ 512ನೇ ನಾಡ ಪ್ರಭು ಕೆಂಪೇಗೌಡರ ಜಯಂತಿಯ ಬಿಬಿಎಂಪಿಯ ಕೇಂದ್ರ ಕಚೇರಿಯ ಮುಂಭಾಗದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಕೆಂಪೇಗೌಡರ ಸೊಸೆ ಮಹಾತ್ಯಾಗಿ ಲಕ್ಷೀದೇವಿ ಪ್ರತಿಮೆಗೆ ಇಂದು ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತರು ಗೌರವ್ ಗುಪ್ತ ಅವರು ಮಾಲಾರ್ಪಣೆ ಹಾಗೂ ಪುಷ್ಪಾರ್ಪಣೆ ನೆರವೇರಿಸಿದರು.
ಈ ವೇಳೆ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ಡಿ.ರಂದೀಪ್, ದಯಾನಂದ್, ಡಾ. ಹರೀಶ್ ಕುಮಾರ್, ಮನೋಜ್ ಜೈನ್, ಬಸವರಾಜು, ರವೀಂದ್ರ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.