ಬೆಳಗಾವಿ: ರಾಜ್ಯದ ವಿವಿಧೆಡೆ ನಿನ್ನೆ ಮತ್ತು ಇಂದು ಬರೀ ಅಪರಾಧ ಪ್ರಕರಣಗಳ ಸುದ್ದಿಗಳೇ ಹೆಚ್ಚಾಗಿ ಕೇಳಿ ಬಂದಿದ್ದು, ಕುಂದಾ ನಗರಿಯಲ್ಲಿ ಕೆಎಸ್ಆರ್‌ಟಿಸಿ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ಕೆಎಸ್ಆರ್‌ಟಿಸಿ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಬೆಳಗಾವಿಯ ಕೆಎಸ್‌ಆರ್‌ಟಿಸಿ 3ನೇ ಘಟಕದ ಮೆಕ್ಯಾನಿಕ್ ಬಸವರಾಜ ವಿ. ನರಸನ್ನವರ್ ಎಂದು ತಿಳಿದು ಬಂದಿದೆ.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ಸಂಜೆ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಸುದ್ದಿ ಮಾಸುವ ಮುನ್ನವೇ ಕುಂದಾನಗರಿಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದ್ದು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಅಣಕಿಸುವಂತಿದೆ.
ಘಟನೆ ವಿವರ: ಬೆಳಗಾವಿ ನಗರದ ಕೆಎಸ್‌ಆರ್‌ಟಿಸಿ ಮೂರನೇ ಬಸ್ ಘಟಕದ ಮಹಿಳಾ ಸಿಬ್ಬಂದಿ ತಮ್ಮ ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದರು. ಆ ವೇಳೆ ಆಕೆಯನ್ನು ಮೆಕ್ಯಾನಿಕ್ ಬಸವರಾಜ ಹಿಂಬಾಲಿಸಿದ್ದಾನೆ.
ಅದನ್ನು ಅರಿಯ ಆಕೆ ಆತ ನನ್ನ ಹಿಂದೆ ಬರುತ್ತಿರುವುದಕ್ಕೆ ಮಾತನಾಡಿಸಿದ್ದು, ಮನೆ ಸಮೀಪವೇ ಬಂದಿದ್ದರಿಂದ ಮನೆ ಬರುವಂತೆ ಹೇಳಿದ್ದಾರೆ. ಅದನ್ನೇ ಕಾಯುತ್ತಿದ್ದ ಕಾಮುಕ ಆಕೆಯ ಮನೆಗೆ ಹೋಗಿದ್ದಾನೆ.
ತಮ್ಮದೇ ಕಚೇರಿಯ ಸಿಬ್ಬಂದಿ ಎಂದು ಆ ಮಹಿಳೆ ಆತನನ್ನು ಮನೆಗೆ ಕರೆದು ಆತ ಬಂದ ಬಳಿಕ ಸಹೋದ್ಯೋಗಿಗೆ ಟೀ ಮಾಡಿಕೊಡೋಣಾ ಎಂದು ಅಡುಗೆ ಮನೆಗೆ ಹೋದಾಗ ಆರೋಪಿ ಅತ್ಯಾಚಾರ ಮಾಡುವುದಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾರೆ. ಇನ್ನು ಅಕ್ಕಪಕ್ಕದ ಜನರು ಸ್ಥಳಕ್ಕೆ ಬರುತ್ತಿದ್ದಂತೆ ಬಸವರಾಜ ಪರಾರಿಯಾಗಿದ್ದಾನೆ.
ಕೆಎಸ್ಆರ್‌ಟಿಸಿ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇರೆಗೆ ಬಸವರಾಜ ವಿ. ನರಸನ್ನವರ್ ಎಂಬಾತನನ್ನು ಬೆಳಗಾವಿಯ ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.
ಬುಧ ವಾರ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ಬಸವರಾಜ, ಬೆಳಗಾವಿ ಮೂರನೇ ಬಸ್ ಘಟಕದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಪ್ರಕರಣ ದಾಖಲಾಗುತ್ತಿದ್ದಂತೆ ಕೆಎಸ್ಆರ್‌ಟಿಸಿ ಡಿಸಿ ಪಿ.ವೈ. ನಾಯಕ್ ಬಸವರಾಜನನ್ನು ಅಮಾನತು ಮಾಡಿದ್ದಾರೆ.