NEWSನಮ್ಮಜಿಲ್ಲೆರಾಜಕೀಯ

ಕೊಳ್ಳೇಗಾಲ ಶಾಸಕ ಮಹೇಶ್‌ ಬಿಜೆಪಿ ಸೇರ್ಪಡೆ: ಪಕ್ಷದ ಬಾವುಟ ನೀಡಿ ಸ್ವಾಗತಿಸಿದ ಸಿಎಂ ಬಿಎಸ್‌ಬಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊಳ್ಳೇಗಾಲದ ಶಾಸಕ ಎನ್.ಮಹೇಶ್ ಗುರುವಾರ (ಇಂದು) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ವೈ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಸಮಾರಂಭದಲ್ಲಿ ಎನ್.ಮಹೇಶ್ ಅವರನ್ನು ಪಕ್ಷ ಬರಮಾಡಿಕೊಂಡು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತುಳಿತಕ್ಕೆ ಒಳಗಾದವರಿಗೆ ಸ್ವಾಭಿಮಾನದ ಬದುಕು ಸಿಗಲಿದೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ ಆಗಲಿದೆ ಎಂಬ ವಿಶ್ವಾಸದೊಂದಿಗೆ ಕೊಳ್ಳೇಗಾಲದ ಶಾಸಕ ಮಹೇಶ್ ಅವರು ಬಿಜೆಪಿ ಸೇರಿದ್ದಾರೆ ಎಂದರು.

ಇನ್ನು ರಾಜ್ಯದ ಸಮಗ್ರ ಅಭಿವೃದ್ಧಿಯ ಆಶಯವನ್ನು ರಾಜ್ಯ ಸರ್ಕಾರ ಈಡೇರಿಸಲಿದೆ. ಆ ಭಾಗದಲ್ಲಿ ಸಾಮರಸ್ಯ, ಸಹೋದರತ್ವ ಭಾವನೆ ಇರುವ ಸಾಮಾಜಿಕ ನೆಲೆಗಟ್ಟು ಸ್ಥಾಪನೆ ಆಗಲಿದೆ ಎಂದು ಭರವಸೆ ನೀಡಿದರು.

ಮಹೇಶ್ ಅವರು ಪಕ್ಷದ ಜೊತೆ ಮತ್ತು ಯಡಿಯೂರಪ್ಪ ಅವರ ಜೊತೆಗೆ ಹೊಂದಿರುವ ಸಂಬಂಧ ಮತ್ತು ಅನುಭವ ಇವತ್ತು ಅವರ ಈ ನಿರ್ಣಯಕ್ಕೆ ಪೂರಕವಾಗಿದೆ. ಅವರನ್ನು ಪಕ್ಷಕ್ಕೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದೊಂದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಎನ್.ಮಹೇಶ್ ಅವರ ಸೇರ್ಪಡೆಯ ಶುಭ ಕ್ಷಣ ಈಗ ಬಂದಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಬರುವುದರ ಮುನ್ಸೂಚನೆ ಇದಾಗಿದ್ದು, ರಾಜ್ಯದಲ್ಲಿ ದಲಿತ ಸಮೂಹ ಬಿಜೆಪಿ ಪರವಾಗಿದೆ ಎಂಬ ಸಂದೇಶ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಲುಪಲು ನಮ್ಮ ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ತಿಳಿಸಿದರು.

ಮಹೇಶ್ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆಗೆ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕನಿಷ್ಠ 135 ಸ್ಥಾನ ಗೆದ್ದು ಸ್ವಂತ ಬಲದಿಂದ ಅಧಿಕಾರಕ್ಕೆ ಬರಬೇಕೆಂಬ ಸಂಕಲ್ಪ ನಮ್ಮದಾಗಿದೆ. ಅದಕ್ಕಾಗಿ ಎಲ್ಲರೂ ಶ್ರಮಿಸಬೇಕು. ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡೋಣ ಎಂದರು.

ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಬಿಎಸ್‍ಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ ಎನ್. ಮಹೇಶ್ ಅವರು ಈಗ ಬಿಜೆಪಿ ಸೇರಿದ್ದಾರೆ. ನರೇಂದ್ರ ಮೋದಿಯವರ ಆಡಳಿತ, ರಾಜ್ಯದಲ್ಲಿ ಯಡಿಯೂರಪ್ಪ ಅವರ ಆಡಳಿತ, ಬಿಜೆಪಿ ಚಿಂತನೆ, ವಿಚಾರಧಾರೆಗಳನ್ನು ಮೆಚ್ಚಿ ಬಿಜೆಪಿಗೆ ಸೇರಿದ್ದು ಅವರಿಗೆ ಸ್ವಾಗತ ಎಂದರು.

ಇವರ ಮೂಲಕ ಬಿಜೆಪಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಆಗಬೇಕು. ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಬೇರೆ ಬೇರೆ ಪಕ್ಷಗಳ ಹತ್ತಾರು ಜನರು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರ ಏಳು ವರ್ಷಗಳ ಅಭಿವೃದ್ಧಿ ಕಾರ್ಯ, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಜನಪರ ಆಡಳಿತವನ್ನು ಮೆಚ್ಚಿಕೊಂಡು ಅನೇಕರು ಬಿಜೆಪಿ ಸೇರಲು ಉತ್ಸುಕತೆ ತೋರಿದ್ದಾರೆ ಎಂದು ಹೇಳಿದರು.

ಡಾ. ಬಾಬಾಸಾಹೇಬ್ ಅಂಬೇಡ್ಕರರಿಗೆ ನ್ಯಾಯ ನೀಡುವ ಕಾರ್ಯವನ್ನು ಬಿಜೆಪಿಯ ಕೇಂದ್ರ ಸರ್ಕಾರ ಮಾಡಿದೆ. ಇದನ್ನು ಗಮನಿಸಿ ದಲಿತ ಸಮುದಾಯವು ಈಗ ಬಿಜೆಪಿಯತ್ತ ಸಹಜವಾಗಿಯೇ ಆಕರ್ಷಿತವಾಗುತ್ತಿದೆ ಎಂದರು.

ಎನ್.ಮಹೇಶ್ ಮಾತನಾಡಿ, ರಾಷ್ಟ್ರದ 130 ಕೋಟಿ ಜನರ ಅಭಿವೃದ್ಧಿಗಾಗಿ ಬಿಜೆಪಿ ಪ್ರಯತ್ನಿಸುತ್ತಿದೆ. ಆ ವಿಚಾರವನ್ನು ಗಮನಿಸಿ ನಾನು ಬಿಜೆಪಿ ಸೇರುತ್ತಿದ್ದೇನೆ. ಇದಕ್ಕೆ ಮತ್ತೊಂದು ಪ್ರೇರಕ ಶಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರು. ಬಿಜೆಪಿ ಈಗ ಪ್ರಬುದ್ಧ ಮನಸ್ಥಿತಿಯೊಂದಿಗೆ ರಾಷ್ಟ್ರವನ್ನು ಸಮಗ್ರ ಅಭಿವೃದ್ಧಿ ಕಡೆ ಒಯ್ಯುತ್ತಿದೆ. ಅದೂ ನನ್ನ ಬಿಜೆಪಿ ಸೇರ್ಪಡೆಗೆ ಕಾರಣ ಎಂದರು.

ಮಾಜಿ ಸಿಎಂ ಯಡಿಯೂರಪ್ಪ ಅವರು ನನಗೆ ನೈತಿಕ ಸ್ಥೈರ್ಯ ತುಂಬಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ನನಗೆ ಹಲವಾರು ವರ್ಷಗಳಿಂದ ಪರಿಚಿತರು. ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಮತ್ತು ಪಕ್ಷದ ಎಲ್ಲಾ ಮುಖಂಡರ ಜತೆ ಸೇರಿ ಪಕ್ಷದ ಸಂಘಟನೆಗೆ ಶ್ರಮಿಸಲಿದ್ದೇನೆ ಎಂದು ತಿಳಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್ ರವಿಕುಮಾರ್, ಸಿದ್ದರಾಜು, ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ಆರ್ ಅಶೋಕ್, ಸಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್, ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

Leave a Reply

error: Content is protected !!
LATEST
ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ