ಪಿರಿಯಾಪಟ್ಟಣ: ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಗ್ರಾಮಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಮುಂದಾಗಬೇಕು ಎಂದು ತಾಲೂಕು ಉದ್ಯೋಗ ಖಾತ್ರಿ ಮೇಲ್ವಿಚಾರಕ ಕೆ.ಎಂ.ರಘುನಾಥ್ ತಿಳಿಸಿದರು.
ತಾಲೂಕಿನ ಮಾಕೋಡು ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ನಡೆದ 2020-21 ನೇ ಸಾಲಿನ ಜಮಾಬಂದಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು, ರೈತರು ಕೇಂದ್ರ ಸರ್ಕಾರದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ರೈತರು ಒಕ್ಕಣೆ ಮಾಡಲು ರಾಶಿ ಖಣ, ಜಮೀನುಗಳಿಗೆ ತೆರಳಲು ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ರಸ್ತೆ ನಿರ್ಮಾಣ.
ದನದ ಕೊಟ್ಟಿಗೆ, ಕುರಿದೊಡ್ಡಿ ನಿರ್ಮಾಣ ಅಲ್ಲದೆ ಕೆರೆಗಳ ಊಳೆತ್ತುವುದು, ಶೌಚಾಲಯ, ಆಟದ ಮೈದಾನ ನಿರ್ಮಾಣ, ಸ್ಮಶಾನ ಅಭಿವೃದ್ಧಿ, ಕೊಳವೆಬಾವಿ ಪಕ್ಕ ಇಂಗು ತೊಟ್ಟಿ, ಗ್ರಾಮೀಣ ಉದ್ಯಾನವನ, ಅಂಗನವಾಡಿ ಕೇಂದ್ರ ನಿರ್ಮಾಣ, ರೈತರಿಗಾಗಿ ಗೋದಾಮುಗಳು, ರಾಜೀವ್ ಗಾಂಧಿ ಸೇವಾ ಮಳಿಗೆ ನಿರ್ಮಾಣ ಕಾಮಗಾರಿಗಳಿದ್ದು, ಇವುಗಳಲ್ಲಿ ಗ್ರಾಮಕ್ಕೆ ಬೇಕಾಗಿರುವ ಯಾವುದೆ ಕೆಲಸಗಳನ್ನು ಉದ್ಯೋಗ ಖಾತರಿಯಲ್ಲಿ ಮಾಡಬಹುದು ಎಂದರು.
ಪಿಡಿಒ ನಾಗಶೆಟ್ಟಿ ಮಾತನಾಡಿ, ಮಾಕೋಡು ಪಂಚಾಯಿತಿಯಲ್ಲಿ ಉದ್ಯೋಗಖಾತ್ರಿ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದು, ತೆರಿಗೆ ವಸುಲಾತಿಯನ್ನು ಮಾಡಿ ನಿಗದಿತ ಸಮಯಕ್ಕೆ ಬ್ಯಾಂಕಿಗೆ ಠೇವಣಿ ಇಡುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ, ಅಭಿವೃದ್ದಿಗೆ ಸಂಬಂಧಿಸಿದಂತೆ ಯಾವುದಾದರೂ ಲೋಪದೋಷಗಳು ಕಂಡುಬಂದಲ್ಲಿ ಅದನ್ನು ಸರಿಪಡಿಸಿಕೊಳ್ಳಲು ಈ ಜಮಾಬಂದಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ರಮೇಶ್ ಮಾತನಾಡಿ ಪಂಚಯಿತಿಯ ಎಲ್ಲಾ ಸದಸ್ಯರ ಸಹಕಾರದಿಂದ ಉದ್ಯೋಗಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ತಾಲ್ಲೂಕಿನಲ್ಲಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದ್ದು ಇದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಕಾರ್ಯದರ್ಶಿ ಲೋಕೇಶ್, ಉಪಾಧ್ಯಕ್ಷೆ ಹೇಮಾ, ಸದಸ್ಯರಾದ ರಾಜೇಗೌಡ, ಕೇಶವಮೂರ್ತಿ, ಯೋಗೇಶ ಆರಾಧ್ಯ, ರೂಪ, ಕಲ್ಪನಾ, ಮುಬೀನ್ ತಾಜ್, ಮಾಲಶ್ರೀ, ಶೈಲಜಾ, ದಾಕ್ಷಾಯಿಣಿ, ಗಂಗಮ್ಮ, ಸಣ್ಣಮಾದೇಗೌಡ, ಯಶೋಧ, ಶಶಿಕಲಾ ಮುಖಂಡರಾದ ಘೋರ್ಪಡೆ ಪಾಟೀಲ್, ನೀಲಕಂಠ, ರಾಜು, ಮಹದೇವ್, ಗ್ರಾಮಸ್ಥರು ಹಾಜರಿದ್ದರು.