ಮಂಡ್ಯ: ಸಂಸದೆ ಸುಮಲತಾ ಅಕ್ರಮ ಗಣಿಗಾರಿಕೆಯಿಂದ ಕೆಅರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂಬ ಹೇಳಿಕೆ ನೀಡಿ ಅಕ್ರಮ ಗಣಿಗಾರಿಕೆ ಮೇಲೆ ದಾಳಿ ಮಾಡಲು ಹೊರಟ ಬೆನ್ನಲ್ಲೇ ಶ್ರೀರಂಗಪಟ್ಟಣ ತಹಸೀಲ್ದಾರ್ ಅಕ್ರಮ ಗಣಿಗಳ ಮೇಲೆ ದಾಳಿ ನಡೆಸಿ ಬಂದ್ ಮಾಡಿಸಿದ್ದಾರೆ.
ಶ್ರೀರಂಗಪಟ್ಟಣದ ಚೆನ್ನನಕೆರೆ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಕ್ವಾರೆ ಹಾಗೂ ಶ್ರೀರಂಗಪಟ್ಟಣ ಕ್ವಾರೆಗಳ ಮೇಲೆ ತಹಸೀಲ್ದಾರ್ ರೂಪಾ ಇಂದು ಪೊಲೀಸರ ಜತೆಗೆ ದಾಳಿ ಮಾಡಿ ಬಂದ್ ಮಾಡಿಸಿದ್ದಾರೆ.
ಇತ್ತೀಚೆಗಷ್ಟೇ ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸಂಸದೆ ಸುಮಲತಾ ಅವರು ಅಕ್ರಮ ಕಲ್ಲು ಕ್ವಾರೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಅಧಿಕಾರಿಗಳು ಅಕ್ರಮ ಗಣಿಗಾಕೆ ಮೇಲೆ ದಾಳಿ ಮಾಡಿದ್ದು, ಕಲ್ಲು ಗಣಿಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಚೆನ್ನನಕೆರೆ ಮತ್ತು ಹಂಗರಹಳ್ಳಿಯಲ್ಲಿ ಗಣಿಗಾರಿಕೆಯಿಂದ ಬಿರುಕು ಬಿಟ್ಟಿರುವ ಮನೆಗಳನ್ನು ನೋಡಿ ಸಂಸದರು ಶಾಕ್ ಆಗಿದ್ದರು. ಈ ವೇಳೆ ಮಾಜಿ ಶಾಸಕ ಬಂಡಿಸಿದ್ದೇಗೌಡ ಮಾಲೀಕತ್ವದ ಗಣಿಗಾರಿಕೆಗೂ ಭೇಟಿ ನೀಡುವಂತೆ ಘೋಷಣೆ ಕೂಗಿದರು. ಆ ಬಳಿಕ ಬಂಡಿಸಿದ್ದೇಗೌಡ ಮಾಲೀಕತ್ವದ ಗಣಿಗಾರಿಕೆಗೂ ಸುಮಲತಾ ಭೇಟಿ ನೀಡಿ ಪರಿಶೀಲಿಸಿದ್ದರು.