ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ಕುಮಾರ್ ಸಾರಿಗೆ ವಾಹನವನ್ನು ದುರುಪಯೋಗ ಪಡಿಸಿಕೊಂಡು ತಾನು ಕಚೇರಿಯಲ್ಲಿದ್ದರೂ ತನ್ನ ಪತ್ನಿ ಮಕ್ಕಳನ್ನು ಉಡುಪಿ, ಮಲ್ಪೆಗೆ ಪ್ರವಾಸ ಕಳುಹಿಸಿದ್ದಾರೆ.
ಕಳೆದ ಶನಿವಾರ (ಅ.23) ಮಂಗಳೂರು ಡಿಪೋನಿಂದ ಕೆಎ 57 ಎಫ್ 39 28 ವಾಹನ ಬೆಳಗ್ಗೆ 9.30ಕ್ಕೆ ಔಟ್ ಆಗಿದ್ದು, ಸಂಜೆ 7ಗಂಟೆಗೆ ಇನ್ ಆಗಿದೆ. ರವೀಂದ್ರ ಭಂಡಾರಿ ಎಂಬ ಚಾಲಕ ಈ ವಾಹನವನ್ನು ಡಿಸಿ ಆದೇಶದ ಮೇರೆಗೆ ತೆಗೆದುಕೊಂಡು ಹೋಗಿದ್ದು, ಡಿಸಿ ಅರುಣ್ ಕುಮಾರ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಉಡುಪಿಯ ಕೃಷ್ಣ ದೇವಾಲಯಕ್ಕೆ ಮತ್ತು ಮಲ್ಪೆ ಬೀಚ್‌ಗೆ ಕರೆದುಕೊಂಡು ಹೋಗಿರುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಆಡಿಯೋ ವೈರಲ್ ಆಗಿದೆ.
ಇನ್ನು ಚಾಲಕ ನನಗೆ AWS ಅವರು ಶನಿವಾರ ಬೆಳಗ್ಗೆ ಕರೆದು ನೀನು ಡಿಸಿ ಕುಟುಂಬದವರನ್ನು ಪ್ರವಾಸಕ್ಕೆ ಕೆಎ 57 ಎಫ್ 39 28 ವಾಹನದಲ್ಲಿ ಕರೆದುಕೊಂಡು ಹೋಗಿ ಬರಬೇಕು ಎಂದು ಡ್ಯೂಟಿ ಕೊಟ್ಟಿದ್ದಾರೆ. ಚಾಲಕನಾದ ನಾನು AWS ಅವರು ಹೇಳಿದಂತೆ ಮಾಡಿದ್ದೇನೆ. ನಾನು ಅವರು ಹೇಳಿದಂತೆ ಕೇಳಬೇಕಲ್ಲವೇ ಎಂದು ತಿಳಿಸಿದ್ದಾರೆ.
ನಾನು 35 ವರ್ಷದಿಂದಲೂ ಸೇವೆ ಸಲ್ಲಿಸುತ್ತಿದ್ದು, ಇತ್ತೀಚೆಗೆ ಒಂದು ಅಪಘಾತವಾಗಿ ನನಗೆ ಮೂಳೆಗಳು ಮುರಿದ್ದು, ಹೆವಿಗಾಡಿಗಳನ್ನು ಓಡಿಸಲು ಸಾಧ್ಯವಾಗದ ಕಾರಣ ಅಧಿಕಾರಿಗಳನ್ನು ಕರೆದುಕೊಂಡು ಹೋಗುವುದು ಬರುವ ಡ್ಯೂಟಿ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ಈಗಾಗಲೇ ಹಲವಾರು ಅಕ್ರಮಗಳ ಆರೋಪ ಹೊತ್ತಿರುವ ಮಂಗಳೂರು ವಿಭಾಗದ ಕೆಎಸ್‌ಆರ್‌ಟಿಸಿ ಡಿಸಿ ಅರುಣ್ ಕುಮಾರ್ ಈಗ ಮತ್ತೆ ಅಧಿಕಾರವನ್ನು ದುರುಪಯೋಗಪಡಿಕೊಂಡು ಇಲಾಖೆಯ ವಾಹನದಲ್ಲಿ ತನ್ನ ಕುಟುಂಬದವರನ್ನು ಪ್ರವಾಸ ಕಳುಹಿಸಿರುವುದು ಯಾವ ನ್ಯಾಯ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ಇನ್ನು ಇವರ ಕಿರುಕುಳದಿಂದ ಕಳೆದ ತಿಂಗಳು ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಆರೋಪವಿದ್ದು, ಊರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ. ಜತೆಗೆ ಮಹಿಳಾ ಸಿಬ್ಬಂದಿಯೊಬ್ಬರಿಗೆ ಮಾನಸಿಕ ಕಿರುಕುಳ ನೀಡಿದ್ದರಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ಇದಿಷ್ಟೇ ಅಲ್ಲದೆ ಹತ್ತಾರು ಆರೋಪಗಳು ಈ ಡಿಸಿ ಅರುಣ್ ಕುಮಾರ್ ಅವರ ವಿರುದ್ಧ ಕೇಳಿ ಬಂದರೂ ಸಾರಿಗೆ ಸಚಿವರಾಗಲಿ ಇಲ್ಲ ಹಿರಿಯ ಅಧಿಕಾರಿಗಳಾಗಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಸಂಸ್ಥೆಯಲ್ಲಿ ಇವರ ದರ್ಪ ಮಿತಿ ಮೀರುತ್ತಿದೆ.
ಇನ್ನಾದರೂ ರೆಡ್‌ಹ್ಯಾಂಡ್ ಆಗಿ ಈಗ ಸಿಕ್ಕಿರುವ ಡಿಸಿ ಅರುಣ್ ಕುಮಾರ್ ಅವರ ವಿರುದ್ಧ ಇಲಾಖೆಯ ಸಚಿವರು ಕ್ರಮ ಜರುಗಿಸುವರೆ ಇಲ್ಲ ಅವರು ಈ ರೀತಿ ಮಾಡೇ ಇಲ್ಲ ಎಂದು ಸಮರ್ಥನೆ ನೀಡುವರೆ ಎಂಬುದನ್ನು ಕಾದು ನೋಡಬೇಕಿದೆ.