ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಸತತ ಲಾಕ್ಡೌನ್ ನಿಂದಾಗಿ ಜನತೆ ಸಂಕಷ್ಟದಲ್ಲಿರುವಾಗ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಹಾಗೂ ಜನತೆ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿವೆ ಎಂದು ಮಾಜಿ ಕಾಡ ಸಚಿವ ಕೆ.ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಸರ್ವೋ ಪೆಟ್ರೋಲ್ ಬಂಕ್ ಮುಂದೆ ಶನಿವಾರ ಪೆಟ್ರೋಲ್ ದರ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪಿರಿಯಾಪಟ್ಟಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ಸಮಯದಲ್ಲಿ ಸಂಕಷ್ಟದಲ್ಲಿರುವ ದೇಶದ ಜನತೆಗೆ ವರವಾಗುವ ಬದಲಾಗಿ ಶಾಪವಾಗಿ ಪರಿಣಮಿಸುತ್ತ ಪೆಟ್ರೋಲ್–ಡೀಸೆಲ್, ಗ್ಯಾಸ್, ವಿದ್ಯುತ್ ದರ ಹಾಗೂ ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುವ ಮುಖಾಂತರ ಗಾಯದ ಮೇಲೆ ಬರೆ ಹಾಕುವ ಕೆಲಸ ಮಾಡುತ್ತಿವೆ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ ಹಿಟ್ಲರ್‌ಗಿಂತ ಕೆಟ್ಟದಾಗಿ ವರ್ತಿಸುತ್ತಾ ದಬ್ಬಾಳಿಕೆಯ ಮೂಲಕ ದೇಶ ಆಳುತ್ತಿದ್ದಾರೆ ಇದು ಹೆಚ್ಚು ದಿನ ನಿಲ್ಲುವುದಿಲ್ಲ, ಬೆಲೆ ಏರಿಕೆಯಲ್ಲಿ ರೂ.33 ಕೇಂದ್ರ ಸರ್ಕಾರಕ್ಕೆ ಆದಾಯ ಹೋಗುತ್ತಿದೆ. ವಿದೇಶದಲ್ಲಿ ಬೆಲೆ ಕಡಿಮೆ ಆಗಿದ್ದರೂ ಹಣ ಮಾಡಿಕೊಳ್ಳಲು ಕೇಂದ್ರ ಸರ್ಕಾರ ತೆರಿಗೆ ಜಾಸ್ತಿ ಮಾಡುವ ಮೂಲಕ ದೇಶವನ್ನು ತಪ್ಪು ದಾರಿಯಲ್ಲಿ ಕೊಂಡೊಯ್ಯತಿದ್ದಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್ ವಕ್ತಾರ ಮಂಜುನಾಥ್ ಗುಂಡೂರಾವ್ ಮಾತನಾಡಿ, ಕೇಂದ್ರ ಸರ್ಕಾರ ಲಜ್ಜೆಗೆಟ್ಟ ಸರ್ಕಾರ, ಇಡೀ ದೇಶದ ಜನರು ಬೇಸತ್ತು ಹೋಗಿದ್ದಾರೆ. ರೈತರು ಪ್ರತಿಭಟನೆ ಮಾಡುತ್ತಿದ್ದರೂ ತಿರುಗಿಯೂ ನೋಡುವ ಕೆಲಸ ಮಾಡದ ಮೋದಿಯವರು ದಿನಕ್ಕೊಂದು ಕ್ಷಣಕ್ಕೊಂದು ಬಟ್ಟೆ ಹಾಕುವ ಮೂಲಕ ಫ್ಯಾಶನ್ ಶೋ ಮಾಡುತ್ತಿದ್ದಾರೆ.
ಸಾಮಾನ್ಯ ವರ್ಗದ ಜನರು ತೀವ್ರ ಸಂಕಷ್ಟದಲ್ಲಿರುವಾಗ ಕೇಂದ್ರ ಸರಕಾರ ತೈಲ ಬೆಲೆ ಏರಿಕೆ ಮಾಡುವ ಮೂಲಕ ದೇಶದ ಜನರಿಂದ ಹಣ ದೋಚುತ್ತಿದೆ. ಕಳೆದ ಒಂದು ವಾರದಲ್ಲಿ 20 ರೂ.ವರೆಗೆ ತೈಲ ಬೆಲೆ ಏರಿಕೆ ಮಾಡಲಾಗಿದೆ. ತಕ್ಷಣವೇ ತೈಲ ಬೆಲೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಇಳಿಕೆ ಮಾಡಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿಇನ್ನೂ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪಿರಿಯಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ಪುರಸಭಾ ಮಾಜಿ ಅಧ್ಯಕ್ಷ ಪಿ.ಎಸ್.ವಿಷಕಂಠಯ್ಯ ಸದಸ್ಯರಾದ ಮಂಜುನಾಥ್, ರವಿ, ಮುಖಂಡರಾದ ಸುಂಡವಾಳು ವೆಂಕಟೇಶ್, ಭೂತನಹಳ್ಳಿ ಕರಿಗೌಡ, ಆಸವಾಳು ಶಫಿ, ಬಿ.ಜೆ. ಬಸವರಾಜ್, ಮೆಡಿಕಲ್ ಮಹದೇವ್, ಅಬ್ಉಲ್ ಅಜೀಜ್, ಎ.ಕೆ.ಗೌಡ, ಜೆ.ಮೋಹನ್, ಮುರುಳೀಧರ್, ರಾಜೇಶ್ ಮತ್ತಿತರರು ಹಾಜರಿದ್ದರು.