ಬೆಂಗಳೂರು: ಅಕ್ರಮ ಗಣಿಗಾರಿಕೆ ಬೇರು ವಿಶಾಲವಾಗಿ ಹಬ್ಬಿಬಿಟ್ಟಿದೆ, ಹೀಗಾಗಿ ಅದನ್ನು ತಡೆಯುವುದು ಸ್ವಲ್ಪ ಕಷ್ಟ. ಆದರೂ ನನ್ನ ಹೋರಾಟ ಮುಂದುವರಿಯಲಿದ್ದು ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಶ್ರಮಿಸುತ್ತೇನೆ. ಇನ್ನು ನನ್ನ ಹೋರಾಟದತ್ತ ನನ್ನ ಗಮನ ಇರುತ್ತದಷ್ಟೇ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ರಾಜಭವನದ ಬಳಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ನಾವು ಅಡ್ಡದಾರಿಯಲ್ಲಿ ಹೋಗುವುದು ಬೇಡ. ನಮ್ಮ ನೋವನ್ನು ಶಾಂತಿಯುತವಾಗಿ ಹೇಳೋಣ. ನಾನು ಅವರ ವಿರುದ್ಧ ಹೋರಾಟ ಮಾಡಿಲ್ಲ. ನನ್ನ ಹೋರಾಟ ಅಕ್ರಮ ಗಣಿಗಾರಿಕೆ ವಿರುದ್ಧ ಅಷ್ಟೆ ಎಂದರು.
ಇನ್ನು ನಾನು ಯಾರನ್ನೂ ಟಾರ್ಗೆಟ್ ಮಾಡಿ ರಾಜಕೀಯ ಮಾಡಿಲ್ಲ. ಈಗಾಗಲೇ 2 ಬಾರಿ ಗಣಿಗಾರಿಕೆ ವಿಚಾರ ಪ್ರಸ್ತಾಪಿಸಿದ್ದೇನೆ. ಇನ್ನು ಮುಂದೆ ಮತ್ತಷ್ಟು ಹೆಚ್ಚಾಗಿ ವಿಚಾರ ಪ್ರಸ್ತಾಪಿಸುತ್ತೇನೆ ಎಂದರು.
ಕುಮಾರಸ್ವಾಮಿ ಅವರ ಕದನ ವಿರಾಮ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಗಮನ ಅಕ್ರಮ ಗಣಿಗಾರಿಕೆ ನಿಲ್ಲಿಸುವುದು. ನಾನು ಯಾರನ್ನೂ ಟಾರ್ಗೆಟ್ ಮಾಡಿಲ್ಲ ನಾನು ದ್ವೇಷ ರಾಜಕಾರಣ ಮಾಡುತ್ತಿಲ್ಲ ಎಂದು ಹೇಳಿದರು.
ಮೂರ್ನಾಲ್ಕು ದಿನಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ನಿರಾಣಿ ಭೇಟಿಗೆ ಅವಕಾಶ ನೀಡಲಿದ್ದಾರೆ. ದಾಖಲೆ ಕೊಡಬೇಕಾಗಿರುವುದು ನಾನಲ್ಲ, ಅಧಿಕಾರಿಗಳು. ಕಠಿಣ ಕ್ರಮಕೈಗೊಳ್ಳಲು ನಾನು ಮನವಿ ಮಾಡುತ್ತೇನೆ ಅಷ್ಟೆ ಎಂದರು.