ಮಂಡ್ಯ: ಸ್ನೇಹಿತರಿಬ್ಬರು ಒಟ್ಟಿಗೆ ಎಣ್ಣೆ ಪಾರ್ಟಿ ಮಾಡುತ್ತಿದ್ದಾಗ ಆರಂಭವಾದ ಜಗಳ ಒಬ್ಬನ ಕೊಲೆಯ ಮೂಲಕ ಅಂತ್ಯವಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚೆನ್ನನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚೆನ್ನನಹಳ್ಳಿ ಗ್ರಾಮದ ಕುಮಾರ್(30) ಮೃತ ಯುವಕ. ಅದೇ ಗ್ರಾಮದ ಮಹದೇವು ಎಂಬ ಸ್ನೇಹಿತ ಕುಮಾರ್ನನ್ನು ಹತ್ಯೆ ಮಾಡಿದ ಆರೋಪಿ. ಶನಿವಾರ ರಾತ್ರಿ ಕುಮಾರ್ ಹಾಗೂ ಮಹದೇವು ಇಬ್ಬರು ಮದ್ಯ ಸೇವನೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದು, ಈ ವೇಳೆ ಮಹದೇವು ನಮ್ಮ ಮನೆಯಲ್ಲಿ ಯಾರೂ ಇಲ್ಲ, ಇಲ್ಲೇ ಪಾರ್ಟಿ ಮಾಡೋಣ ಬಾ ಎಂದು ಕುಮಾರನನ್ನು ಕರೆದುಕೊಂಡು ಹೋಗಿದ್ದ.
ನಂತರ ಮಹದೇವು ಹಾಗೂ ಕುಮಾರ್ ಇಬ್ಬರೂ ಕಂಠಮಟ್ಟ ಕುಡಿದಿದ್ದಾರೆ. ಬಳಿಕ ಯಾವುದೋ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ಈ ವೇಳೆ ಅದು ಇಬ್ಬರ ನಡುವೆ ತಾರಕಕ್ಕೆ ಏರಿದ್ದು, ಮಹದೇವು ಕುಮಾರನಿಗೆ ಬಾಟಲಿ ಹಾಗೂ ರಾಡಿನಿಂದ ಹೊಡೆದಿದ್ದಾನೆ. ಇದರಿಂದ ರಕ್ತಶ್ರಾವವಾಗಿ ಕುಮಾರ ಮೃತಪಟ್ಟಿದ್ದಾನೆ. ಬಳಿಕ ಮಹದೇವು ಪರಾರಿಯಾಗಿದ್ದಾನೆ. ಈ ಸಂಬಂಧ ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.