ವಿಜಯಪಥ ಸಮಗ್ರ ಸುದ್ದಿ
ಮೈಸೂರು : ಸಾರಾ ಚೌಟ್ರಿಯನ್ನು ಹಳ್ಳದ ಮೇಲೂ ಕಟ್ಟಿಲ್ಲ, ನಾಲೆಯ ಮೇಲೂ ಕಟ್ಟಿಲ್ಲ ಎಂದು ಪ್ರಾದೇಶಿಕ ಆಯುಕ್ತರ ವರದಿಯಲ್ಲಿ ಬಹಿರಂಗವಾಗಿದೆ.
ನಿರ್ಗಮಿತ ಮೈಸೂರು ಡಿಸಿ ರೋಹಿಣಿ ಸಿಂಧೂರಿ, ಶಾಸಕ ಸಾರಾ ಮಹೇಶ್ ವಿರುದ್ದ ಸಾರಾ ಚೌಟ್ರಿ ವಿಚಾರದಲ್ಲಿ ಮಾಡಿದ್ದ ಆರೋಪ ಬಗ್ಗೆ ಶಾಸಕ ಸಾರಾ ಮಹೇಶ್ ತನಿಖೆಗೆ ಆಗ್ರಹಿಸಿದ್ದರು. ಪ್ರಾದೇಶಿಕ ಆಯುಕ್ತರು ಕಂದಾಯ ಅಧಿಕಾರಿಗಳು ಸಮಿತಿ ರಚಿಸಿ ಸಾರಾ ಚೌಟ್ರಿ ಸರ್ವೆಗೆ ಕಳಿಸಿದ್ದರು. ಇಂದು ಸರ್ವೆ ವರದಿ ಬಹಿರಂಗಗೊಂಡಿದೆ.
ಈ ಹಿನ್ನೆಲೆ ಇಂದು ಮೈಸೂರಿನಲ್ಲಿ ಶಾಸಕ ಸಾರಾ ಮಹೇಶ್ ತುರ್ತು ಸುದ್ದಿಗೋಷ್ಠಿ ನಡೆಸಿ ರೋಹಿಣಿ ಸಿಂಧೂರಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಮೈಸೂರಲ್ಲಿ ರಾಜಕಾಲುವೆ ಇಲ್ಲ. ಪೂರ್ಣಯ ನಾಲೆ ಮಾತ್ರ ಇರೋದು. ರಾಜಕಾಲುವೆ ಇಲ್ಲದ ಮೇಲೆ ರಾಜಕಾಲುವೆ ಮೇಲೆ ಎಲ್ಲಿಂದ ಚೌಟ್ರಿ ಕಟ್ಟೋದು? ಎಂದು ಪ್ರಶ್ನಿಸಿದರು.
ಮೈಸೂರು ನಗರದ ಲಿಂಗಾಬುದಿ ಕೆರೆ ಬಳಿ ಅಕ್ರಮ ಮಾಡಿದ ಆರೋಪಗಳನ್ನು ಅಲ್ಲಗಳೆದಿದ್ದಾರೆ. ನನ್ನ ಪತ್ನಿ ಹೆಸರಲ್ಲಿ ಎರಡು ಎಕರೆ ಅಲ್ಲ, ನಾಲ್ಕು ಎಕರೆ ಭೂಮಿ ಇದೆ. ಆದರೆ, ಈ ಭೂಮಿಯನ್ನು 30 ವರ್ಷದ ಹಿಂದೆಯೇ ಖರೀದಿ ಮಾಡಿದ್ದೆ. ನಾನು ರಾಜಕಾಲುವೆ ಅಥವಾ ಹಳ್ಳದ ಮೇಲೆ ಕಟ್ಟಡ ಕಟ್ಟಿದ್ದರೆ ರಾಜ್ಯಪಾಲರಿಗೆ ನೀಡುವೆ. ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗುವೆ. ನೀವು ಐಎಎಸ್ ಹುದ್ದೆಗೆ ರಾಜೀನಾಮೆ ಕೊಡ್ತೀರಾ? ಎಂದು ಸಾ.ರಾ.ಮಹೇಶ್ ಪ್ರಶ್ನಿಸಿದ್ದಾರೆ.
ಈ ರೀತಿಯ ಅಧಿಕಾರಿಯನ್ನು ನಾನು ಜೀವನದಲ್ಲಿ ನೋಡಿಲ್ಲ. ಕೆಲವು ಸಾಮಾಜಿಕ ಜಾಲತಾಣ ಬಳಸಿಕೊಂಡು ಕಮ್ ಬ್ಯಾಕ್ ಅಂತಾ ಶೇರ್ ಟ್ರೆಂಡ್ ಮಾಡುತ್ತಿದ್ದಾರೆ ಎಂದು ರೋಹಿಣಿ ಕಮ್ ಬ್ಯಾಕ್ಗೆ ಅಭಿಯಾನವನ್ನು ಶಾಸಕ ಸಾ.ರಾ.ಮಹೇಶ್ ವ್ಯಂಗ್ಯ ಮಾಡಿದ್ದಾರೆ. ರೋಹಿಣಿ ಸಿಂಧೂರಿ ಅವರಿಗೆ ಮನಸಾಕ್ಷಿ, ಆತ್ಮಸಾಕ್ಷಿ ಅಥವಾ ತಾಯಿ ಹೃದಯ ಇದ್ದರೆ ಒಮ್ಮೆ ಕುಳಿತುಕೊಂಡು ಮನಸಾಕ್ಷಿಯನ್ನು ಕೇಳಿಕೊಳ್ಳಬೇಕು ಎಂದು ಅವರು ರೋಹಿಣಿ ಸಿಂಧೂರಿ ಅವರ ಮೇಲೆ ಹರಿಹಾಯ್ದಿದ್ದಾರೆ.
ನಾನು ಖರೀದಿಸಿರುವ ಭೂಮಿಗೆ ಅರಣ್ಯ ಇಲಾಖೆಯವರೇ ಗಡಿ ನಿಗದಿ ಮಾಡಿದ್ದಾರೆ. ಉಳಿಕೆ ಜಾಗದಲ್ಲಿ ತೆಂಗು ಮತ್ತು ಅಡಿಕೆ ಬೆಳೆದಿದ್ದೇನೆ. ಇದನ್ನು ಕಮರ್ಷಿಯಲ್ ಬದಲಾವಣೆಗೆ ಶುಲ್ಕ ಕಟ್ಟಿದ್ದೇನೆ. ಅಲ್ಲಿ ಯಾವುದೇ ಕಟ್ಟಡ ಕಟ್ಟಿಲ್ಲ, ಅಲ್ಲಿ ಖಾಲಿ ಜಾಗ ಇದೆ. 2018ರ ಕಾಯ್ದೆ ಪ್ರಕಾರ 30 ಮೀಟರ್ ಬಫರ್ ಝೋನ್ ಇದ್ದು, ಅದರಲ್ಲಿ ಮನೆ, ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲ.
ಹಲಸೂರು ಕೆರೆಗೆ ಮಾತ್ರ 60 ಮೀಟರ್ ಬಫರ್ ಝೋನ್ ಇದ್ದು, ಉಳಿದ ಎಲ್ಲೆಡೆ 30 ಮೀಟರ್ ಬಫರ್ ಝೋನ್ ಅನ್ವಯವಾಗುತ್ತದೆ. ಈ ಬಗ್ಗೆ ನ್ಯಾಯಾಲಯವೇ ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪನ್ನು ಈ ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಓದಿಲ್ಲವೇ? ಮೈಸೂರಿನ ಈ ಹಿಂದಿನ ಜಿಲ್ಲಾಧಿಕಾರಿ ಐಎಎಸ್ ಓದಿಲ್ವಾ? ಅಥವಾ ನ್ಯಾಯಾಲಯದ ಈ ಆದೇಶ ಗೊತ್ತಿದ್ದೂ ಕೊಡಲು ಮಾಡಿದ್ರಾ? ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಪ್ರಶ್ನಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತನನ್ನ ಮನೆಗೆ ಕರೆಸಿಕೊಂಡು ರೋಹಿಣಿ ಸಿಂಧೂರಿ ಕೆಲ ದಾಖಲೆ ಪತ್ರ ಪಡೆದಿದ್ದಾರೆ. 4 ಆರೋಪಗಳ ಪೈಕಿ ಎರಡು ನೇರವಾಗಿ ನನಗೆ ಸಂಬಂಧಿಸಿದ್ದಾಗಿದ್ದು, ಪ್ರಾದೇಶಿಕ ಆಯುಕ್ತರಿಗೆ ಜೂನ್ 5ರಂದು ಪತ್ರ ಬರೆದಿದ್ದಾರೆ. ಪತ್ರ ಹೋಗಬೇಕಾದರೆ ಎಡಿಸಿ ಟಪಾಲಿನಲ್ಲಿ ಸಹಿ ಆಗಬೇಕು. ಆದರೆ ಇದಲ್ಲಿ ಕಡತವನ್ನು ಮನೆಗೆ ತರಿಸಿಕೊಂಡು ಸಹಿ ಮಾಡಿದ್ದಾರೆ ಎಂದು ಮೈಸೂರಿನಲ್ಲಿ ಸಾ.ರಾ.ಮಹೇಶ್ ಆರೋಪಿಸಿದ್ದಾರೆ.