ಮೈಸೂರು: ಯಾವತ್ತು ಚುನಾವಣೆ ಆಯಿತೋ ಅಂದಿನಿಂದಲೂ ನಮ್ಮ ಜೊತೆ ಸಂದೇಶ್ ನಾಗರಾಜ್ ಅವರು ಇಲ್ಲ. ಅವರು ನಮ್ಮಿಂದ ದೂರವೇ ಇದ್ದಾರೆ ಎಂದು ಜೆಡಿಎಸ್ ಶಾಸಕ ಸಾರಾ ಮಹೇಶ್ ಹೇಳಿದ್ದಾರೆ.
ಮೈಸೂರಿನಲ್ಲಿ ಶನಿವಾರ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಎಂಎಲ್ಸಿ ಸಂದೇಶ್ ನಾಗರಾಜ್ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಅವರು ನಮ್ಮ ಜೊತೆ ಗುರುತಿಸಿಕೊಂಡಿಲ್ಲ. ಈಗ ಆ ವಿಚಾರ ಅಪ್ರಸ್ತುತ. ಸಂದೇಶ್ ನಾಗರಾಜ್ ಅವರಿಂದ ತೆರವಾಗುವ ಸ್ಥಾನಕ್ಕೆ ಎದುರಾಗಿರುವ ಚುನಾವಣೆಗೆ ಸಜ್ಜಾಗಿದ್ದೇವೆ ಎಂದು ಹೇಳಿದರು.
ನಮ್ಮ ಪಕ್ಷದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಮೈಸೂರು ಭಾಗದಿಂದ ಐದು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಕಡೆಗೆ ಅಚ್ಚರಿಯ ಅಭ್ಯರ್ಥಿಯ ಆಯ್ಕೆಯಾಗಬಹುದು. ನಮ್ಮ ಪಕ್ಷದ ಜನಪ್ರತಿನಿಧಿಗಳು ಮೈಸೂರು ಜಿಲ್ಲೆಯಲ್ಲಿ ಹೆಚ್ಚಿರುವುದರಿಂದ ಗೆಲ್ಲುತ್ತೇವೆ ಎಂದು ಸಾರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಕೋವಿಡ್‌ನಿಂದ ಜನ ಸಂಕಷ್ಟದಲ್ಲಿದ್ದಾರೆ. ಇನ್ನೂ ಕೂಡ ಚೇತರಿಕೆ ಕಂಡಿಲ್ಲ. ಆದರೆ ಈ ಸಂದರ್ಭದಲ್ಲಿ ಮೈಸೂರಿನ ವಾಣಿಜ್ಯ ಉದ್ಯಮಗಳು, ಕಲ್ಯಾಣ ಮಂಟಪಗಳ ಎದುರು ತೆರಿಗೆ ಬಾಕಿ ಇದೆ ಎಂದು ಫಲಕ ಹಾಕಲಾಗುತ್ತಿದೆ.
ಕರ್ನಾಟಕ ಮುನ್ಸಿಪಲ್ ಕಾಯ್ದೆ ಪ್ರಕಾರ ವಾಣಿಜ್ಯ, ವಾಸ, ಖಾಲಿ ನಿವೇಶನ ಹೀಗೆ ಮೂರು ರೀತಿ ತೆರಿಗೆ ಹಾಕಲು ಅವಕಾಶ ಇದೆ. ಮೈಸೂರು ಮಹಾನಗರ ಪಾಲಿಕೆ ಸೂಪರ್ ಸ್ಪೆಷಲ್ ಕಮರ್ಷಿಯಲ್ ಟ್ಯಾಕ್ಸ್ ಹಾಕುತ್ತಿದೆ ಎಂದು ಸಾ ರಾ ಮಹೇಶ್ ಅಸಮಾಧಾನ ಹೊರಹಾಕಿದರು.
ಈ ರೀತಿಯ ಟ್ಯಾಕ್ಸ್ ಮೆಟ್ರೋ ಪಾಲಿಟನ್ ಸಿಟಿ ಬೆಂಗಳೂರಿನಲ್ಲೂ ಇಲ್ಲ. ನೀವು ಮನಸೋ ಇಚ್ಛೆ ತೆರಿಗೆ ಹಾಕಿದರೆ ಸಾರ್ವಜನಿಕರ ಗತಿಯೇನು ? ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮಾತನಾಡಿದ್ದೇನೆ. ಕೆಎಂಎ ಪ್ರಕಾರ ಕಲ್ಯಾಣ ಮಂಟಪಗಳಿಗೆ 4 ಲಕ್ಷ ರೂ. ತೆರಿಗೆ ಹಾಕಲು ಅವಕಾಶ ಇದೆ.
ಮಹಾನಗರ ಪಾಲಿಕೆ 8.70 ಲಕ್ಷ ರೂ. ತೆರಿಗೆ ಹಾಕಿದೆ. ಇದನ್ನು ಪ್ರಶ್ನಿಸಿ ಕಲ್ಯಾಣ ಮಂಟಪಗಳ ಮಾಲೀಕರ ಸಂಘದವರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಆದ್ದರಿಂದ ತೆರಿಗೆ ಕಟ್ಟಿಲ್ಲ ಎಂದು ಶಾಸಕ ಸಾ.ರಾ. ಮಹೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನನಗೆ ಬಿಟ್ ಕಾಯಿನ್ ಅಂದರೇನು ಎಂದೇ ಗೊತ್ತಾಗಿದ್ದು 15 ದಿನದ ಹಿಂದೆ. ನನಗೆ ಬಿಟ್ ಕಾಯಿನ್ ಗೊತ್ತಿರಲಿಲ್ಲ. ಅದರ ಬೆಲೆಯೂ ಗೊತ್ತಿಲ್ಲ. ಜನರಿಗೆ ವೈಟ್ ಮನಿ, ಬ್ಲಾಕ್ ಮನಿ ಗೊತ್ತಿತ್ತು. ಆದರೆ ಬಿಟ್ ಕಾಯಿನ್ ಮನಿ ಗೊತ್ತಿರಲಿಲ್ಲ, ಈಗ ಗೊತ್ತಾಗುತ್ತಿದೆ ಎಂದು ರಾಜ್ಯದಲ್ಲಿ ಸದ್ಯ ಸಾಕಷ್ಟು ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ವಿಚಾರವಾಗಿಯೂ ಶಾಸಕ ಸಾರಾ ಪ್ರತಿಕ್ರಿಯಿಸಿದರು.