ಹೆಣ್ಣಾಗಿ ಬದಲಾಗಿದ್ದ ದೇಗುಲದ ಧರ್ಮದರ್ಶಿ, ಅರ್ಚಕ ನಿಗೂಢ ಸಾವು
ದೇವಾಲಯದ ಧರ್ಮದರ್ಶಿ ಮಾತೃ ಸ್ವರೂಪಿಣಿ ದೇವಿ ಅಲಿಯಾಸ್ ಶ್ರೀಧರ್ ಹಾಗೂ ಅರ್ಚಕ ಲಕ್ಷ್ಮೀಪತಿ ಮೃತರು
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಗುಟ್ಟಹಳ್ಳಿಯ ಆದಿಶಕ್ತಿ ಕೋಳಾಲಮ್ಮ ದೇವಿಯ ದೇಗುಲದ ಧರ್ಮದರ್ಶಿ ಹಾಗೂ ಅರ್ಚಕ ಇಬ್ಬರೂ ಗುರುವಾರ ನಿಗೂಢವಾಗಿ ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಇದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.
ಮೃತರನ್ನು ದೇವಾಲಯದ ಧರ್ಮದರ್ಶಿ ಮಾತೃ ಸ್ವರೂಪಿಣಿ ದೇವಿ ಅಲಿಯಾಸ್ ಶ್ರೀಧರ್ ಹಾಗೂ ದೇವಾಲಯದ ಅರ್ಚಕ ಶಿಡ್ಲಘಟ್ಟ ತಾಲೂಕಿನ ಕೆ.ಮುತ್ತಕದಹಳ್ಳಿ ನಿವಾಸಿ ಲಕ್ಷ್ಮೀಪತಿ ಎಂದು ಗುರುತಿಸಲಾಗಿದೆ.
ಶ್ರೀಧರ್ ಹೆಣ್ಣಾಗಿ ಪರಿವರ್ತನೆ ಆದ 15 ವರ್ಷಗಳ ಹಿಂದೆಯೇ ಗುಟ್ಟ ಹಳ್ಳಿಯಲ್ಲಿ ಕೋಳಾಲಮ್ಮ ದೇವಿ ದೇಗುಲ ನಿರ್ಮಿಸಿ ಅಂದಿನಿಂದಲೂ ಭಕ್ತರಿಗೆ ಉಪದೇಶ ನೀಡುವ ಕಾಯದಕದಲ್ಲಿ ತೊಡಗಿಕೊಂಡಿದ್ದರು.
ಇನ್ನು ದೇವಾಲಯಕ್ಕೆ ಬರುವರ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದಾಗ ತನ್ನ ಶಿಷ್ಯ ಲಕ್ಷ್ಮೀಪತಿಯನ್ನು ಪೂಜಾರಿಯಾಗಿ ನೇಮಿಸಿಕೊಂಡಿದ್ದರು. ಆದರೆ ಶುಕ್ರವಾರ ಬೆಳಗ್ಗೆ ಇವರಿಬ್ಬರ ಮೃತದೇಹಗಳು ದೇವಾಲಯದ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ. ಮೇಲ್ನೋಟಕ್ಕೆ ಇದು ಕೊಲೆ ಸಂಶಯ ವ್ಯಕ್ತವಾಗಿದ್ದು, ಚಿಂತಾಮಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧರ್ಮದರ್ಶಿ ದೇವಿ ಅಲಿಯಾಸ್ ಶ್ರೀಧರ ವಿವಿಧ ಸಮಾಜ ಸೇವಾ ಕಾರ್ಯಗಳ ಮೂಲಕವೂ ಸ್ಥಳೀಯ ಸುತ್ತಮುತ್ತಲಿನ ಜನರಲ್ಲಿ ಹೆಚ್ಚು ಪ್ರೀತಿ, ಭಕ್ತಿಗೆ ಪಾತ್ರವಾಗಿದ್ದರು. ಅವರ ನಿಗೂಢ ಸಾವಿನ ಪ್ರಕರಣ ಅಕ್ಕಪಕ್ಕದ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ಚಿಂತಾಮಣಿಯ ಗುಟ್ಟಹಳ್ಳಿ ಗ್ರಾಮದ ದೇವಾಲಯದ ಧರ್ಮದರ್ಶಿ ಹಾಗೂ ಅರ್ಚಕ ಅನುಮಾನಸ್ಪದ ಸಾವಿನ ಬಗ್ಗೆ ಜಿಲ್ಲಾ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ಮಾತನಾಡಿ, ಸದ್ಯಕ್ಕೆ ಇಬ್ಬರ ಕೊಲೆ ಅನುಮಾನಸ್ಪವಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಇಬ್ಬರು ಮೃತ ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿವೆ.
ಜೊತೆಗೆ ಸ್ಥಳದಲ್ಲಿ ಡೆತ್ ನೋಟ್ ಸಹ ಪತ್ತೆಯಾಗಿದೆ. ಅದು ಅವರೇ ಬರೆದಿರುವುದು ಹೌದೋ, ಅಲ್ಲವೋ ಸ್ಪಷ್ಟವಾಗಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವೈದ್ಯಕೀಯ ವರದಿ ನಂತರವೇ ಸಾವಿನ ಬಗ್ಗೆ ಸ್ಪಷ್ಟತೆ ತಿಳಿಯಲಿದೆ ಎಂದು ತಿಳಿಸಿದ್ದಾರೆ.