ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಾರಿಗೆ ನೌಕರರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಸ್ಥಗಿತಗೊಳಿಸುವ ಬಗ್ಗೆ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಬುಧವಾರ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದು, ಗುರುವಾರದಿಂದ (ಏ.22) ಎಲ್ಲಾ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಇದನ್ನೂ ಓದಿರಿ: ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ವಾಪಸ್ ಬಗ್ಗೆ ನಾಳೆ ಅಂತಿಮ ತೀರ್ಮಾನ
ಇಂದು ಸಂಜೆ ಗಾಂಧಿನಗರದ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಸಾರಿಗೆ ನೌಕರರು ಮಾಡುತ್ತಿರುವ ಮುಷ್ಕರವನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯಲಾಗಿದೆ.
ಇನ್ನು ನಾಳೆ (ಏ.22) ಬೆಳಗ್ಗೆ 11.40ಕ್ಕೆ ನ್ಯಾಯಾಲಯದಲ್ಲಿ ನಮ್ಮ ನೌಕರರ ಸಮಸ್ಯೆ, ಬೇಡಿಕೆ ಮತ್ತು ಮುಷ್ಕರ ನಿರತ ಸುಮಾರು 20 ಸಾವಿರ ನೌಕರರ ವಜಾ, ಅಮಾನತು ಹಾಗೂ ವರ್ಗಾವಣೆ ಮಾಡಿರುವ ಬಗ್ಗೆಯೂ ನ್ಯಾಯಪೀಠದ ಗಮನಕ್ಕೆ ತರಲಾಗುವುದು.
ಈ ನಡುವೆ ನಿನ್ನೆ ನ್ಯಾಯಪೀಠ ಕೊರೊನಾದ ಈ ವೇಳೆ ಮುಷ್ಕರ ಮಾಡುವುದು ಸಮಂಜಸವಲ್ಲ. ಎಲ್ಲಾ ನೌಕರರು ಮುಷ್ಕರವನ್ನು ಸ್ಥಗಿತಗೊಳಿಸಿ ನಿಮ್ಮ ಬೇಡಿಕೆಗಳನ್ನು ಕಾಯ್ದಿರಿಸಿ ಕರ್ತವ್ಯಕ್ಕೆ ಹಾಜರಾಗಿ ಎಂದು ಸೂಚನೆ ನೀಡಿದೆ. ಹೀಗಾಗಿ ಈ ಮುಷ್ಕರಕ್ಕೂ ಹಿಂದೆ ಇದ್ದ ರೀತಿಯಲ್ಲೇ ಸಾರಿಗೆಯ ನಾಲ್ಕೂ ನಿಗಮಗಳ ಎಲ್ಲಾ ನೌಕರರು ಕರ್ತವ್ಯ ನಿವರ್ಹಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿರಿ: ಕೋವಿಡ್-19 ಹೆಚ್ಚಾಗುತ್ತಿರುವ ಸಮಯದಲ್ಲಿ ಮುಷ್ಕರ ಬೇಡ – ಕರ್ತವ್ಯಕ್ಕೆ ಹಾಜರಾಗಿ: ಸಾರಿಗೆ ನೌಕರರಿಗೆ ಹೈಕೋರ್ಟ್ ಸೂಚನೆ
ಈ ನಡುವೆ ಇಂದು ಕರ್ತವ್ಯಕ್ಕೆ ಹಾಜರಾದ ಕೆಲ ನೌಕರರಿಂದ ಬಿಎಂಟಿಸಿಯ ಕೆಲ ಘಟಕಗಳಲ್ಲಿ ಮುಂದೆ ನಾವು ಯಾವುದೇ ಮುಷ್ಕರ, ಪ್ರತಿಭಟನೆಗಳಲ್ಲಿ ಭಾಗವಹಿಸುವುದಿಲ್ಲ ಎಂಬ ಮುಚ್ಚಳಿಕೆಯನ್ನು ಬರೆಸಿಕೊಂಡಿದ್ದು, ಇದು ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಮತ್ತು ದಮನಕಾರಿ ನೀತಿಯಾಗಿದೆ. ಇದರ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಹೇಳಿದರು.
ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದ್ದು
ಕೋವಿಡ್ ವೈರಸ್ ಬಾಧಿಸುತ್ತಿರುವ ಈ ಹೊತ್ತಿನಲ್ಲಿ ಮುಷ್ಕರ ಮಾಡುವುದು ಸೂಕ್ತವಲ್ಲ. ನಿಮ್ಮ ಬೇಡಿಕೆ ಕಾಯ್ದಿರಿಸಿ ಸೇವೆ ಆರಂಭಿಸಿ ಎಂದು ಸಾರಿಗೆ ನೌಕರರಿಗೆ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿತ್ತು. ಹೈಕೋರ್ಟ್ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಸಾರಿಗೆ ನೌಕರರು ಮಾಡುತ್ತಿರುವ ಮುಷ್ಕರ ಇಂದಿಗೆ ಕೊನೆಯಾಗಿದ್ದು ನಾಳೆಯಿಂದ ಎಲ್ಲಾ ನೌಕರರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.