ವಿಜಯಪಥ ಸಮಗ್ರ ಸುದ್ದಿ
ವಿಜಯಪುರ: ನಗರದ ತಕ್ಕೆ ಮಸೀದಿ ಬಳಿ ಸಿಡಿಲು ಬಡಿದು ಮೂವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಬುಧವಾರ ರಾತ್ರಿ ಭಾರೀ ಮಳೆಯಾಗುತ್ತಿದ್ದರಿಂದ ಮಸೀದಿ ಬಳಿ ಈ ಐವರು ಆಶ್ರಯ ಪಡೆದಿದ್ದರು. ಅವರಲ್ಲಿ ಅಶೋಕ್ ರಾಮ್ ಕಾರ್ ಜೋಳ್(50), ಬಾಷಾಸಾಬ್ ಕರಜಗಿ(39) ಹಾಗೂ ಜಾವೆದ್ ಜಾಲ್‍ಗೆರಿ(34) ಅವರಿಗೆ ಸಿಡಿಲು ಬಡಿದು ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಸಬೀನಾ ಮತ್ತು ಮತ್ತೊಬ್ಬ ಅಪರಚಿತ ವ್ಯಕ್ತಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಡದಲಿ ಗ್ರಾಮದಲ್ಲೂ ಸಿಡಿಲು ಬಡಿದು ಬೇವಿನ ಮರದ ಕೆಳಗೆ ಆಶ್ರಯ ಪಡೆದಿದ್ದ 9 ಮೇಕೆಗಳು ಸತ್ತುಹೋಗಿವೆ. ಈ ಮಧ್ಯೆ, ವಿಜಯಪುರ, ಬಾಗಲಕೋಟೆ, ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಮುಂದುವರಿದಿದೆ.