ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನೋಡಿಕೊಳ್ಳುತ್ತಿದ್ದ ಮೈಸೂರಿನ ಶಕ್ತಿಧಾಮದ ಮಕ್ಕಳ ಜವಾಬ್ದಾರಿಯನ್ನು ಅವರ ನಿಧನದ ಬಳಿಕ ತಮಿಳು ನಟ ವಿಶಾಲ್ ವಹಿಸಿಕೊಳ್ಳಲು ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಬುಧವಾರ ದಿ. ನಟ ಪುನೀತ್ ರಾಜ್‍ಕುಮಾರ್ ಮನೆಗೆ ಆಗಮಿಸಿದ ವಿಶಾಲ್, ಪುನೀತ್ ಪತ್ನಿ ಅಶ್ವಿನಿ ಬಳಿ ಈ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಅಶ್ವಿನಿ ಅವರು ಸ್ವಲ್ಪ ಕಾಲವಕಾಶ ಕೇಳಿದ್ದಾರೆ.
ನಿನ್ನೆ ಶಿವರಾಜ್ ಕುಮಾರ್ ಜತೆ ಮಾತನಾಡಿದ್ದ ವಿಶಾಲ್ ಇಂದು ಪುನೀತ್ ಮನೆಗೆ ಆಗಮಿಸಿ ಶಕ್ತಿಧಾಮದ ಮಕ್ಕಳ ಜವಾಬ್ದಾರಿ ಬಗ್ಗೆ ಅಶ್ವಿನಿ ಜತೆ ಪ್ರಸ್ತಾಪ ಮಾಡಿ ಅನುಮತಿ ಕೇಳಿದರು. ಕೆಲವೇ ದಿನಗಳಲ್ಲಿ ಈ ಬಗ್ಗೆ ತಿಳಿಸುವುದಾಗಿ ಅಶ್ವಿನಿ ಭರವಸೆ ನೀಡಿದರು.
ಶಕ್ತಿಧಾಮದಲ್ಲಿ 1,800 ವಿದ್ಯಾರ್ಥಿಗಳು ಇದ್ದು, ಅವರ ಎಲ್ಲ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಬಗ್ಗೆ ವಿಶಾಲ್, ಅಶ್ವಿನಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಶಿವಣ್ಣ ಬಳಿಯೂ ಚರ್ಚೆ ನಡೆಸಿದರು. ಇದಕ್ಕೂ ಮುನ್ನ ಅಪ್ಪು ಸಮಾಧಿ ಬಳಿ ತೆರಳಿದ ವಿಶಾಲ್ ಪೂಜೆ ಸಲ್ಲಿಸಿದರು.
ಪುನೀತ್ ಅವರು 1,800 ಮಕ್ಕಳಿಗೆ ಉಚಿತ ಶಿಕ್ಷಣ, ಅನಾಥಶ್ರಮ, ವೃದ್ಧಾಶ್ರಮ ನಡೆಸುವುದರ ಜೊತೆಗೆ ತಮ್ಮ ಸಾವಿನ ಬಳಿಕವೂ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇದನ್ನೆಲ್ಲ ನೆನೆಸಿಕೊಳ್ಳುವಾಗ, ಪುನೀತ್ ಇಲ್ಲ ಅನ್ನೋದನ್ನು ಇನ್ನೂ ನಂಬಲು ಆಗುತ್ತಿಲ್ಲ. ಆದರೆ, ಅದೇ ಸತ್ಯ ಎಂದು ವಿಶಾಲ್ ಹೇಳಿದರು.
ಪುನೀತ್ ಅವರಂತಹ ಬಹುಮುಖ ನಟನನ್ನು ನಾವು ಕಳೆದುಕೊಂಡಿದ್ದೇವೆ. ಪುನೀತ್‍ನನ್ನು ನೋಡಿದಾಗ, ನೆನಪಿಸಿಕೊಂಡಾಗ ನನ್ನ ಮನಸ್ಸಿಗೆ ಒಂದು ವಿಷಯ ಬಂತು. ನಿನ್ನ ಗೆಳೆಯನಾಗಿ ಮಾತು ಕೊಡುತ್ತಿದ್ದೇನೆ. ಆ 1,800 ಮಕ್ಕಳಿಗೆ ನಾನು ವಿದ್ಯಾಭ್ಯಾಸ ಕೊಡಿಸುತ್ತೇನೆ. ಮುಂದಿನ ವರ್ಷದಿಂದ ನಿಮ್ಮ ಫೌಂಡೇಷನ್, ನಿಮ್ಮ ಸಮಾಜಸೇವೆಯನ್ನು ನಾನು ಮುಂದುವರಿಸುತ್ತೇನೆ ಎಂದು ಭರವಸೆ ನೀಡಿದ್ದರು.