ನೆಲಮಂಗಲ: ಬೆಳ್ಳಂಬೆಳಗ್ಗೆ ಹ್ಯಾಡಾಳು ಸಮೀಪವಿರುವ ಕನ್ನಡ ಸೇನೆ ರಾಜ್ಯಾದ್ಯಕ್ಷ ಕೆ.ಆರ್.ಕುಮಾರ್ ಮಾಲೀಕತ್ವದ ಗೋದಾಮಿಗೆ ಬೆಂಕಿ ಆವರಿಸಿದ್ದು, ಧಗಧಗನೆ ಹೊತ್ತಿ ಉರಿದಿದ್ದು, ಲಕ್ಷಾಂತರ ರೂ. ಮೌಲ್ಯದ ನಿತ್ಯ ಬಳಕೆಯ ಟಾಟಾ ಉತ್ಪನ್ನಗಳು ಸುಟ್ಟು ಕರಕಲಾಗಿವೆ.
ಬೆಂಗಳೂರಿನ ಹೊರವಲಯ ನೆಲಮಂಗಲ ತಾಲೂಕಿನಲ್ಲಿದ್ದ ಗೋದಾಮಿಗೆ ಬೆಂಕಿ ಬಿದಿದ್ದರಿಂದ ಗೋದಾಮಿನಲ್ಲಿ ಶೇಖರಣೆ ಮಾಡಿದ್ದ ಟಾಟಾ ಉತ್ಪನ್ನಗಳು ಸುಟ್ಟು ಹೋಗಿವೆ.
ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ನೋಡ ನೊಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಗೋದಾಮನ್ನೇ ವ್ಯಾಪಿಸಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ನೆಲಮಂಗಲ ಅಗ್ನಿಶಾಮಕ ದಳದ ನಾಲ್ಕು ವಾಹನಗಳಲ್ಲಿ ಆಗಮಿಸಿದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದ್ದಾರೆ.
ಬೆಂಕಿ ನಂದಿಸುವ ವೇಳೆ ಗೋದಾಮಿನ ಶೀಟ್ ಬಿದ್ದು ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರಿಗೆ ಗಾಯವಾಗಿದ್ದು, ಇದೀಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಹಾಗೂ ಸಿಪಿಐ ಹರೀಶ್ ಪಿಎಸ್ ವಸಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಕೆ.ಆರ್. ಕುಮಾರ್ ಮಾತನಾಡಿ, ನಾವು ಏಜೆನ್ಸಿಗೆ ಬಾಡಿಗೆ ನೀಡಿದ್ದೇವು. ಈ ಘಟನೆ ವಿದ್ಯುತ್ ಅವಘಡದಿಂದ ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಇಲ್ಲ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.