ಬೆಂಗಳೂರು: ಹಿರಿಯ ನಟ ಶಿವರಾಂ ಅವರು ಮೊನ್ನೆ ಕಾರು ಅಪಘಾತವಾಗಿ ಜತೆಗೆ ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವುದು ಎಲ್ಲರಿಗೂ ನೋವುಂಟು ಮಾಡಿದೆ. ಆದರೆ ಅವರು ಇನ್ನು ಹೆಚ್ಚು ಕಾಲ ನಮ್ಮೊಂದಿಗೆ ಇರುವುದಿಲ್ಲ ಎಂದು ವೈದ್ಯರು ಕಣ್ಣೀರು ಹಾಕುತ್ತಿದ್ದಾರೆ.
ಬ್ಯಾಂಕ್ ಕಾಲೋನಿಯ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕ್ಷಣಕ್ಷಣಕ್ಕೂ ಅವರ ಆರೋಗ್ಯ ಬಿಗಡಾಯಿಸುತ್ತಿದೆ. ಅವರ ವಿಚಾರದಲ್ಲಿ ಮಿರಾಕಲ್ ನಡೆಯಬಹುದು ಎಂದು ವೈದ್ಯರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈಗ ಅವರ ಎಲ್ಲ ಭರವಸೆಗಳು ಕುಸಿದು ಬೀಳುತ್ತಿವೆ.
ಶಿವರಾಂ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಮೋಹನ್ ಅವರು ಈ ಬಗ್ಗೆ ಸುದ್ದಿಗಾರರಿಗೆ ಹೆಲ್ತ್ ಅಪ್ಡೇಟ್ ನೀಡುವ ವೇಳೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಶಿವರಾಂ ಅವರು ಇನ್ನು ಹೆಚ್ಚು ಹೊತ್ತು ನಮ್ಮ ಜೊತೆ ಇರಲ್ಲ ಅಂತ ಹೇಳಲು ನನಗೆ ತುಂಬ ಕಷ್ಟ ಆಗುತ್ತಿದೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಹೆಚ್ಚುವರಿ ಚಿಕಿತ್ಸೆ ನೀಡಿದರೆ ಶಿವರಾಂ ಅವರ ದೇಹ ಸ್ಪಂದಿಸುತ್ತದೆ ಎಂಬ ಭರವಸೆ ಕಡಿಮೆ ಆಗಿದೆ. ಅವರು ನಮಗೆ ಜೀವನಾಡಿ ಆಗಿದ್ದರು. ರೋಗಿ ಎನ್ನುವುದಕ್ಕಿಂತಲೂ ನನಗೆ ಅವರು ಅಪ್ಪನ ಸ್ಥಾನದಲ್ಲಿ ಇದ್ದವರು. ಈಗ ಅವರಿಗೆ ಚಿಕಿತ್ಸೆ ನೀಡಲು ತುಂಬ ಕಷ್ಟ ಆಗುತ್ತಿದೆ.
ಅವರ ಕಷ್ಟವನ್ನು ನೋಡಲು ಸಾಧ್ಯವಾಗುತ್ತಿಲ್ಲ. ಗರಿಷ್ಠ ಲೈಫ್ ಸಪೋರ್ಟ್ನಲ್ಲಿ ಅವರು ಇದ್ದಾರೆ. ಚೇತರಿಕೆ ಕಾಣುವ ಚಾನ್ಸ್ ತುಂಬ ಕಡಿಮೆ ಇದೆ. ಇನ್ನು ಎಷ್ಟು ಗಂಟೆ, ಎಷ್ಟು ದಿನ ಅಂತ ಹೇಳುವುದು ಕಷ್ಟ ಎಂದು ಡಾ. ಮೋಹನ್ ಮಾಹಿತಿ ನೀಡಿದ್ದಾರೆ.
ಶಿವರಾಂ ಕುಟುಂಬದವರು ಜೊತೆಯಲ್ಲೇ ಇದ್ದಾರೆ. ಕೊನೇ ಗಳಿಗೆವರೆಗೂ ಕೈಲಾದ ಹೋರಾಟ ಮಾಡಿ ಅಂತ ಅವರು ಹೇಳುತ್ತಿದ್ದಾರೆ. ಅವರಿಗೂ ಪರಿಸ್ಥಿತಿ ಅರ್ಥ ಆಗಿದೆ. ತುಂಬ ಸಹಕಾರ ನೀಡಿದ್ದಾರೆ.
ಇಂದು (ಡಿ.4) ಶಿವರಾಂ ಅವರಿಗೆ ಎಂಆರ್ಐ ಸ್ಕ್ಯಾನ್ ಮಾಡುವುದು ಸಹ ಕಷ್ಟ ಆಗಿದೆ. ಹಾಸಿಗೆಯಿಂದ ಶಿಫ್ಟ್ ಮಾಡಿದರೆ ಬಿಪಿ ಕಡಿಮೆ ಆಗಬಹುದು ಎಂಬ ಭಯ ಇದೆ. ಪರಿಸ್ಥಿತಿ ಹದಗೆಟ್ಟಿದೆ ಎಂದು ವೈದ್ಯರು ಹೇಳಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ.
ಬ್ರೇನ್ ಮಾತ್ರವಲ್ಲದೇ ಹೃದಯಕ್ಕೂ ಸಂಬಂಧಿಸಿದ ವಿಚಾರ ಇದು. ಹಾಗಾಗಿ ಹೃದಯ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಗಮನಿಸಬೇಕು. ಸದ್ಯಕ್ಕಂತೂ ಏನೂ ಹೇಳಲು ಸಾಧ್ಯವಾಗುತ್ತಿಲ್ಲ. ಅವರಿಗೆ ಯಾವುದೇ ರೀತಿ ಹಿಂಸೆ ಆಗುತ್ತಿಲ್ಲ. ಶಾಂತವಾಗಿ ಇದ್ದಾರೆ.
ಇಂದು ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತಿದೆ. ಬಿಪಿ ಕುಸಿಯುತ್ತಿದೆ. ಇದರಿಂದ ಬಹು ಅಂಗಾಂಗಕ್ಕೆ ತೊಂದರೆ ಆಗುತ್ತಿದೆ ಎಂದು ಡಾ. ಮೋಹನ್ ಮಾಹಿತಿ ಹಂಚಿಕೊಂಡಿದ್ದಾರೆ.