ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದ ಗುಂಡ್ರೆ ವಲಯದಲ್ಲಿ ಹುಲಿಗಳ ಜತೆ ಕಾದಾಟದಲ್ಲಿ ಗಾಯಗೊಂಡಿದ್ದ ಗಂಡು ಹುಲಿಯೊಂದನ್ನು ಶುಕ್ರವಾರ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ಗುಂಡ್ರೆ ವಲಯದ ನಾಯಳ್ಳ ಗಸ್ತಿನ ಸುತ್ತನಹಳ್ಳ ಪ್ರದೇಶದಲ್ಲಿ 4 – 5 ವರ್ಷದ ಗಂಡು ಹುಲಿಯು ಮತ್ತೊಂದು ಹುಲಿ ಜೊತೆ ಕಾದಾಟ ಮಾಡುವ ವೇಳೆ ಅದರ ಮುಂಭಾಗದ ಎಡಗಾಲು ಹಾಗೂ ಕಣ್ಣಿನ ಭಾಗದಲ್ಲಿ ಗಾಯವಾಗಿದೆ.
ಈ ಗಾಯಗೊಂಡಿದ್ದ ಹುಲಿಯ ಚಲನವಲನವು ಗುರುವಾರ (ಜು.8) ಅರಣ್ಯ ಹಾಗೂ ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ಗಮನಕ್ಕೆ ಬಂದಿತ್ತು. ನಂತರ ಹುಲಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ಬೋನ್ ಇರಿಸಲಾಗಿತ್ತು. ಆದರೆ ಬೋನ್‌ಗೆ ಬೀಳದ ಕಾರಣ ಡಾಟ್ ಮಾಡಿ ಹುಲಿಯನ್ನು ಸೆರೆಹಿಡಿಯಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕ್ಷೇತ್ರ ನಿರ್ದೇಶಕ ಎಸ್.ಆರ್.ನಟೇಶ್ ವನ್ಯಜೀವಿ ಪರಿಪಾಲಕಿ ಕೃತಿಕ ಆಲನಹಳ್ಳಿ, ಹೆಡಿಯಾಲ ಉಪವಿಭಾಗದ ಎಸಿಎಫ್ ಎಂ.ಎಸ್.ರವಿಕುಮಾರ್ ಅವರ ಸಮ್ಮುಖದಲ್ಲಿ ಇಲಾಖಾ ಪಶುವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ಡಾಟ್ ಮಾಡಿ ಹುಲಿಯನ್ನು ಸೆರೆ ಹಿಡಿಯಲಾಯಿತು.
ನಂತರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯಂತೆ ಹುಲಿಗೆ ಪ್ರಥಮ ಚಿಕಿತ್ಸೆ ನಡೆಸಿ ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‍ಗೆ ಕಳುಹಿಸಲಾಯಿತು ಎಂದು ಗುಂಡ್ಲುಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ತಿಳಿಸಿದ್ದಾರೆ.
ವಲಯ ಅರಣ್ಯಾಧಿಕಾರಿಗಳಾದ ಶಶಿಧರ್, ಸಚಿನ್, ಷಣ್ಮುಗ ಹಾಗೂ ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ಇದ್ದರು.