ಮುಂಬೈ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (MSRTC) ನೌಕರರು ನಷ್ಟದಲ್ಲಿರುವ ನಿಗಮವನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸುವ ತಮ್ಮ ಬೇಡಿಕೆಯಲ್ಲಿ ಸಡಿಲಿಸದೆ ಮುಷ್ಕರ ಮುಂದುವರಿಸುತ್ತಿರುವುದಕ್ಕೆ ಬೆಚ್ಚಿದ ಸರ್ಕಾರ ನೌಕರರ ಬೇಡಿಕೆ ಪರಿಶೀಲನೆಗೆ ಸಮಿತಿ ರಚಿಸಿದೆ.
ನವೆಂಬರ್ 15 ರಂದು (ಇಂದು) ತಮ್ಮ ಮುಷ್ಕರವನ್ನು ಮುಂದುವರಿಸಿದ್ದರ ಪರಿಣಾಮ ರಾಜ್ಯದ ಎಲ್ಲ 250 ಡಿಪೋಗಳಲ್ಲಿ ಬಸ್ ಕಾರ್ಯಾಚರಣೆ ಸಂಪೂರ್ಣವಾಗಿ ಸ್ತಬ್ದಗೊಂಡಿತ್ತು. ಇದರಿಂದ ಅಧಿಕಾರಿಗಳು ಬೆಚ್ಚಿದ್ದು ನೌಕರರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನವೆಂಬರ್ 14 ರಂದು, ಸುಮಾರು 4,000 ನೌಕರರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು. ಇದರಿಂದ ನಿಗಮದ ಸುಮಾರು 80 ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಕಾರ್ಯಾಚರಿಸಿದವು ಎಂದು ಅಧಿಕಾರಿಗಳು ಹೇಳಿಕೊಂಡಿದ್ದರು. ಆದರೆ, ಮುಷ್ಕರ ನಿರತರು ಒಂದು ಬಸ್‌ಕೂಡ ನಮ್ಮ ನೌಕರರಿಂದ ಚಾಲನೆಗೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಎಲ್ಲ 250 ಡಿಪೋಗಳಲ್ಲಿ ಬಸ್ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದು, ಇಂದು ಡಿಪೋಗಳಿಗೆ ಬೀಗ ಜಡಿಯುವ ಮೂಲಕ ಮುಷ್ಕವರನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಆದಾಗ್ಯೂ, ಅನೇಕ ಕಾರ್ಯಾಗಾರದ ಉದ್ಯೋಗಿಗಳು ಮತ್ತೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂದು MSRTC ಯ ವಕ್ತಾರರು ತಿಳಿಸಿದ್ದಾರೆ.
ಅಕ್ಟೋಬರ್ 28 ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ ನೌಕರರು ಈ ತಿಂಗಳ ಆರಂಭದಲ್ಲಿ ಅದನ್ನು ತೀವ್ರಗೊಳಿಸಿದರು. ಎಂಎಸ್‌ಆರ್‌ಟಿಸಿಯನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸುವ ತಮ್ಮ ಬೇಡಿಕೆಯಿಂದ ಹಿಂಸರಿಯುವುದಕ್ಕೆ ಅವರು ಸಂಪೂರ್ಣವಾಗಿ ರಾಕರಿಸಿದ್ದಾರೆ.
ಇನ್ನು ಸಂಸ್ಥೆ ವಿಲೀನಗೊಂಡರೆ ನೌಕರರಿಗೆ ಉತ್ತಮ ಸಂಬಳದ ಜೊತೆಗೆ ಸರ್ಕಾರಿ ನೌಕರರ ಸ್ಥಾನಮಾನವು ಸಿಗುತ್ತದೆ. ಹೀಗಾಗಿ ತಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರವನ್ನು ಕೈ ಬಿಡುವುದಿಲ್ಲ ಎಂದು ಪಟ್ಟುಹಿಡಿದು ಕುಳಿತ್ತಿದ್ದಾರೆ.
ಈ ಮಧ್ಯೆ ಎಂಎಸ್‌ಆರ್‌ಟಿಸಿ ಕಳೆದ ಶುಕ್ರವಾರ ಕರಪತ್ರ ಬಿಡುಗಡೆ ಮಾಡಿ, ನೌಕರರು ಮುಷ್ಕರವನ್ನು ತಕ್ಷಣವೇ ಕೈಬಿಡುವಂತೆ ಒತ್ತಾಯಿಸಿತು. ಆದರೆ ಆ ಕರಪತ್ರಕ್ಕೆ ಮುಷ್ಕರ ನಿರತರು ಸೊಪ್ಪುಹಾಕಿಲ್ಲ. ಹೀಗಾಗಿ ಮುಷ್ಕರ ಇಂದಿಗೆ 19ನೇ ದಿನಕ್ಕೆ ಕಾಲಿಟ್ಟಿದೆ.
ಮುಷ್ಕರದಿಂದಾಗಿ ಸಾಮಾನ್ಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರೆ ಮತ್ತೊಂದೆಡೆ MSRTC ಮುಷ್ಕರದಿಂದಾಗಿ ಪ್ರತಿದಿನ ₹ 15 ರಿಂದ 20 ಕೋಟಿ ರೂ.ಗಳಷ್ಟು ನಷ್ಟಅನುಭವಿಸುತ್ತಿದೆ ಎಂದು ನಿಗಮವು ಹೇಳಿದೆ. ಅಲ್ಲದೆ ಇದರಿಂದ ದೀರ್ಘಾವಧಿಯ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದೆ.