ಗುಂಟೂರು: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ತಮಿಳುನಾಡು ಮತ್ತು ಕರ್ನಾಟಕದ ರಾಜ್ಯಪಾಲರಾಗಿದ್ದ ಕೋನಿಜೇಟಿ ರೋಸಯ್ಯ ಇಂದು (ಡಿ.4) ಮುಂಜಾನೆ ನಿಧನರಾದರು.
89 ವರ್ಷದ ರೋಸಯ್ಯ ಅವರು ಬಹುದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಳಗ್ಗೆ ಕಡಿಮೆ ರಕ್ತದೊತ್ತಡಕ್ಕೆ ಒಳಗಾಗಿದ್ದ ಅವರನ್ನು ಬಂಜಾರಾ ಹಿಲ್ಸ್ ಸ್ಟಾರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಕೆ. ರೋಸಯ್ಯ ಕಾಂಗ್ರೆಸ್ನ ಪ್ರಮುಖ ನಾಯಕರು. ಅವರು ಶಾಸಕರು, ಎಂಎಲ್ಸಿ, ಸಂಸದರಾಗಿ ಕಾರ್ಯನಿರ್ವಹಿಸಿದ್ದಾರೆ. ಅವಿಭಜಿತ ಆಂಧ್ರಪ್ರದೇಶದ (ತೆಲಂಗಾಣ ಬೇರೆ ರಾಜ್ಯವಾಗಿ ವಿಭಜನೆ ಆಗುವುದಕ್ಕೂ ಪೂರ್ವ) ಹಣಕಾಸು ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
ಸುಮಾರು ಏಳು ಬಾರಿ ಬಜೆಟ್ ಮಂಡನೆ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದರು. ವೈ.ಎಸ್. ರಾಜಶೇಖರ್ ರೆಡ್ಡಿ ನಿಧನದ ನಂತರ ಅವಿಭಜಿತ ಆಂಧ್ರಪ್ರದೇಶದ ಸಿಇಒ ಆಗಿದ್ದರು. ಅಷ್ಟೇ ಅಲ್ಲ, ತಮಿಳುನಾಡು ಮತ್ತು ಕರ್ನಾಟಕದ ರಾಜ್ಯಪಾಲರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ರೋಸಯ್ಯ 1933ರ ಜುಲೈ 4ರಂದು, ಆಂಧ್ರದ ಗುಂಟೂರು ಜಿಲ್ಲೆಯ ವೆಮೂರಿನಲ್ಲಿ ಜನಿಸಿದ್ದರು. ಗುಂಟೂರಿನ ಹಿಂದು ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದಿದ್ದಾರೆ. ಅವರು 1968, 1974 ಮತ್ತು 1980 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.