ಜೊಹಾನ್ಸ್‌ಬರ್ಗ್: ಇಸ್ರೇಲ್‍ನಲ್ಲಿ ನಡೆಯಲಿರುವ ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆಯಿಂದ ಹಿಂದೆ ಸರಿಯಲು ಮಿಸ್ ಸೌತ್ ಆಫ್ರಿಕಾ ನಿರಾಕರಿಸಿದ ಕಾರಣ ದಕ್ಷಿಣ ಆಫ್ರಿಕಾ ಸರಕಾರ ಆಕೆಯ ಸ್ಪರ್ಧೆಗೆ ಬೆಂಬಲ ವಾಪಸ್ ಪಡೆದುಕೊಂಡಿದೆ.
ಫೆಲೆಸ್ತೀನಿ ಜನರಿಗೆ ಬೆಂಬಲ ವ್ಯಕ್ತಪಡಿಸಲು ಇಸ್ರೇಲ್‍ನಲ್ಲಿ ನಡೆಯುವ ಮಿಸ್ ಯುನಿವರ್ಸ್ ಸ್ಪರ್ಧೆಯನ್ನು ಬಹಿಷ್ಕರಿಸಬೇಕೆಂಬ ಕರೆಗಳ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಸರಕಾರ ಈ ಕ್ರಮಕೈಗೊಂಡಿದೆ.
ಅಕ್ಟೋಬರ್ ತಿಂಗಳಿನಲ್ಲಿ ಮಿಸ್ ಸೌತ್ ಆಫ್ರಿಕಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಲಲೇಲ ಮಸ್ವಾನೆ ಹಾಗೂ ಸ್ಪರ್ಧೆ ಆಯೋಜಕ ಸಂಸ್ಥೆ ಮಿಸ್ ಎಸ್‍ಎಗೆ ಡಿಸೆಂಬರ್‌ನಲ್ಲಿ ನಡೆಯುವ ಮಿಸ್ ಯುನಿವರ್ಸ್ ಸ್ಪರ್ಧೆಯನ್ನು ಬಹಿಷ್ಕರಿಸಬೇಕೆಂದು ಫೆಲೆಸ್ತೀನ್ ಪರ ಸಂಘಟನೆಗಳು ಕರೆ ನೀಡಿದ್ದವು.
ಮಿಸ್ ಸೌತ್ ಆಫ್ರಿಕಾ ವಿಜೇತೆಗೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಲಾಗಿದೆ ಆಕೆಗೆ ಇನ್ನೂ ಮನವರಿಕೆ ಮಾಡಿಕೊಡುವ ವಿಶ್ವಾಸವಿದೆ ಎಂದು ದಕ್ಷಿಣ ಆಫ್ರಿಕಾದ ಕ್ರೀಡಾ, ಕಲೆ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.
ಸೌತ್ ಆಪ್ರಿಕಾ ಹಿಂದಿನಿಂದಲೂ ಫೆಲೆಸ್ತೀನೀಯರನ್ನು ಬೆಂಬಲಿಸುತ್ತಾ ಬಂದಿದ್ದು ಇಸ್ರೇಲ್ ಆಡಳಿತ ಫೆಲೆಸ್ತೀನೀಯರನ್ನು ನೋಡಿಕೊಳ್ಳುವ ರೀತಿಗೆ ವಿರೋಧ ವ್ಯಕ್ತಪಡಿಸುತ್ತಲೇ ಇದೆ.
ಮಿಸ್ ಯುನಿವರ್ಸ್ ಸ್ಪರ್ಧೆಗೆ ಬಹಿಷ್ಕಾರಕ್ಕೆ ದಕ್ಷಿಣ ಆಫ್ರಿಕಾದ ಆಡಳಿತ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಹಾಗೂ ಕೆಲ ಪ್ರಮುಖ ಕಾರ್ಮಿಕ ಸಂಘಟನೆಗಳೂ ಬೆಂಬಲ ವ್ಯಕ್ತಪಡಿಸಿವೆ.