ಮುಂಬೈ: ಸರ್ಕಾರದೊಂದಿಗೆ ಎಂಎಸ್‌ಆರ್‌ಟಿಸಿ ನಿಗಮವನ್ನು ವಿಲೀನ ಮಾಡಬೇಕು ಎಂದು ಆಗ್ರಹಿಸಿ ಕಳೆದ 30ದಿನಗಳಿಂದ ಮುಷ್ಕರ ನಡೆಸುತ್ತಿರುವ ನೌಕರರಲ್ಲಿ 3,000 ಕ್ಕೂ ಹೆಚ್ಚು ಕಾಯಂ ನೌಕರರನ್ನು ಅಮಾನತುಗೊಳಿಸಲಾಗಿದೆ.
ಈ ಕಾಯಂ ನೌಕರರ ಜತೆಗೆ 1,000 ಕ್ಕೂ ಹೆಚ್ಚು ದಿನಗೂಲಿ ನೌಕರರನ್ನು ಒಂದು ತಿಂಗಳ ಕಾಲ ತೆಗೆದುಹಾಕಲಾಗಿದೆ. ಆದರೂ ಪಟ್ಟು ಸಡಿಲಿಸದ ನೌಕರರು ಮುಷ್ಕರ ಮುಂದುವರಿಸಿದ್ದಾರೆ.
ಶುಕ್ರವಾರ 500ಕ್ಕೂ ಹೆಚ್ಚು ನೌಕರರನ್ನು ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ವಜಾಗೊಳಿಸಲಾಗಿದೆ. ಜತೆಗೆ ಮುಷ್ಕರ ಬಿಟ್ಟು ಮತ್ತೆ ಕರ್ತವ್ಯಕ್ಕೆ ಬರದಿದ್ದರೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ಅನಿಲ್ ಪರಬ್ ಎಚ್ಚರಿಕೆ ನೀಡಿದ್ದಾರೆ.
ಕೆಲಸಕ್ಕೆ ಹಾಜರಾಗದ 500 ದಿನಗೂಲಿ ಕಾರ್ಮಿಕರನ್ನು ವಜಾಗೊಳಿಸುವ ನಿರ್ಧಾರವನ್ನು ನಾವು ಇಂದು ತೆಗೆದುಕೊಂಡಿದ್ದೇವೆ ಎಂದು ಸಚಿವರು ಹೇಳಿದರು.
ಒಟ್ಟಾರೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಇದುವರೆಗೆ 3,215 ಕಾಯಂ ನೌಕರರನ್ನು ಅಮಾನತುಗೊಳಿಸಿದ್ದು, 1,226 ದಿನಗೂಲಿ ಕಾರ್ಮಿಕರನ್ನು ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ನೌಕರರು ಕರ್ತವ್ಯಕ್ಕೆ ಹಾಜರ್: ಆದಾಗ್ಯೂ, ಈ ವಾರದ ಆರಂಭದಲ್ಲಿ ಸರ್ಕಾರ ಮಧ್ಯಂತರ ವೇತನ ಹೆಚ್ಚಳ ಘೋಷಿಸಿದ ನಂತರ ಹಲವಾರು ನೌಕರರು ಕರ್ತವ್ಯಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಒಂದೆರಡು ದಿನಗಳಲ್ಲಿ ಪರಿಸ್ಥಿತಿ ಗಣನೀಯವಾಗಿ ಸುಧಾರಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.
ಮುಷ್ಕರವನ್ನು ಮುಂದುವರಿಸಲು ನೌಕರರು ಪಟ್ಟು ಹಿಡಿದೇ ಕುಳಿತರೆ ಈಗ ಘೋಷಣೆ ಮಾಡಿರುವ ವೇತನ ಹೆಚ್ಚಳದ ನಿರ್ಧಾರವನ್ನು ಸರ್ಕಾರ ಪರಿಶೀಲಿಸಬೇಕಾಗುತ್ತದೆ ಎಂದು ಪರಬ್ ಎಚ್ಚರಿಕೆ ನೀಡಿದ್ದಾರೆ. ನೌಕರರ ಮೂಲ ವೇತನದಲ್ಲಿ ₹ 2,500 ರಿಂದ ₹ 5,000 ವರೆಗೆ ಹೆಚ್ಚಳವನ್ನು ಘೋಷಿಸಲಾಗಿದೆ, ಇದು “ಇತಿಹಾಸದಲ್ಲಿ ಅತ್ಯಧಿಕ” ಎಂದು ಸಚಿವರು ಹೇಳಿಕೊಂಡಿದ್ದಾರೆ.
ಸಭೆಯಲ್ಲಿ ನಡೆದ ಚರ್ಚೆ: ಈಗ ಮುಷ್ಕರ ಕೈಬಿಟ್ಟು ಕೆಲಸಕ್ಕೆ೪ ಮರಳಿ ನಂತರ ವೇತನ ಹೆಚ್ಚಳದಲ್ಲಿ ಏನಾದರೂ ಮತ್ತೆ ವ್ಯತ್ಯಾಸಗಳಿದ್ದರೆ ಅದರ ಬಗ್ಗೆ ಚರ್ಚೆ ಮಾಡಿ ಒಂದು ಒಳ್ಳೆ ನಿರ್ಧಾರ ತೆಗೆದುಕೊಳ್ಳೋಣ ಎಂದು ಶುಕ್ರವಾರ ನಡೆದ ಸಭೆಯಲ್ಲಿ ಒಕ್ಕೂಟದ ಮುಖಂಡರಿಗೆ ಪರಬ್ ಭರವಸೆ ನೀಡಿದರು.
ಇನ್ನು ನಾನು ಸಚಿವನಾಗಿ ಇರವವರೆ ಯಾವುದೇ ಉದ್ಯೋಗಿಗೆ ಅನ್ಯಾಯವಾಗಲು ಬಿಡುವುದಿಲ್ಲ ಅಥವಾ ಯಾವುದೇ ಕಿರಿಯ ಉದ್ಯೋಗಿ ಹಿರಿಯರಿಗಿಂತ ಹೆಚ್ಚಿನ ಸಂಬಳವನ್ನು ಪಡೆಯಲು ಸಾಧ್ಯವಿಲ್ಲಂತೆ ನೋಡಿಕೊಳ್ಳುತ್ತೇನೆ ಎಂದೂ ಭರವಸೆ ನೀಡಿದರು.
ಈ ನಡುವೆ 7ನೇ ವೇತನ ಆಯೋಗ ಜಾರಿ ಹಾಗೂ ನಾಲ್ಕು ವರ್ಷಗಳ ಬದಲಾಗಿ 10 ವರ್ಷಕ್ಕೆ ಒಪ್ಪಂದಕ್ಕೆ ಸಹಿ ಹಾಕಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟರು. ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ನಾನು ಸಿದ್ಧನಿದ್ದೇನೆ. ಆದರೆ ಆರ್ಥಿಕ ಹೊರೆ ಹೊರಲು ಸಿದ್ದನಿಲ್ಲ. ಹೀಗಾಗಿ ಮೊಸಲು ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಹಾಜರಾಗಿ ಎಂದು ತಿಳಿಸಿದರು.
ಆದರೆ, ನಿಮ್ಮ ನಿಲುವಿನಲ್ಲಿ ಖಚಿತತೆಯಾದರೆ ನಾವು ಕೆಲಸಕ್ಕೆ ಹಾಜರಾಗುತ್ತೇವೆ ಅಲ್ಲಿಯವರೆಗೆ ಮುಷ್ಕರ ನಿಲ್ಲಿಸುವ ಮಾತೆ ಇಲ್ಲ ಎಂದು ಸಭೆಯಲ್ಲಿ ಹಾಜರಿದ್ದ ಒಕ್ಕೂಟದ ಮುಖಂಡರು ಹೇಳಿದ್ದಾರೆ.