17ನೇ ದಿನಕ್ಕೆ ಕಾಲಿಟ್ಟ ಎಂಎಸ್‌ಆರ್‌ಟಿಸಿ ಮುಷ್ಕರ: 2,053 ನೌಕರರ ಅಮಾನತು – ಆದರೂ ಕುಗ್ಗದ ಹೋರಾಟದ ಕಿಚ್ಚು
ನ.15ರಂದು (ನಾಳೆ) ಡಿಪೋಗಳಿಗೆ ಬೀಗ ಜಡಿದು ಹೋರಾಟದ ಎಚ್ಚರಿಕೆ
ಮುಂಬೈ: ಸರ್ಕಾರಿ ನೌಕರರೆಂದು ಘೊಷಣೆ ಮಾಡಬೇಕು ಎಂಬುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಒಕ್ಕೂಟಗಳು ಕರೆ ನೀಡಿರುವ ಮುಷ್ಕರ 17 ನೇ ದಿನಕ್ಕೆ ಕಾಲಿಟ್ಟಿದೆ.
ಈ ನಡುವೆ 1,532 ನೌಕರರು ನಿನ್ನೆ ಕರ್ತವ್ಯಕ್ಕೆ ಮರಳಿದ್ದು, ಯಾವುದೇ ಪರಿಹಾರ ಕಾಣದೆ ರಾಜ್ಯಾದ್ಯಂತ 36 ಬಸ್‌ಗಳು ಕಾರ್ಯಾಚರಿಸುತ್ತಿವೆ ಎಂದು ಎಂಎಸ್‌ಆರ್‌ಟಿಸಿ ಹೇಳಿಕೊಂಡಿದೆ. ಆದರೆ ಕರ್ತವ್ಯಕ್ಕೆ ಹಾಜರಾದ ನೌಕರರ ಸಂಖ್ಯೆ ಮತ್ತು ರಸ್ತೆಗಳಲ್ಲಿ ಓಡಿದ ಬಸ್‌ಗಳ ಸಂಖ್ಯೆ ಅವರು ಹೇಳಿಕೆಗೂ ಯಾವುದೇ ಹೋಲಿಕೆ ಇಲ್ಲ.
ನಿಗಮವು ಸುಮಾರು 95 ಸಾವಿರ ನೌಕರರನ್ನು ಹೊಂದಿದೆ ಮತ್ತು ಸುಮಾರು 16 ಸಾವಿರ ಬಸ್‌ಗಳು ಇವೆ. ಈ ನಡುವೆ ನೌಕರರ ದುಡಿಮೆಗೆ ತಕ್ಕಂತೆ ವೇತನ ಸಿಗುತ್ತಿಲ್ಲ. ಕಾರಣ ಆರ್ಥಿಕ ಕೊರತೆ ಎದರಿಸುತ್ತಿದೆ. ಹೀಗಾಗಿ ನಿಗಮವನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸಿ, ಸರ್ಕಾರಿ ನೌಕರರ ಸ್ಥಾನಮಾನ ಮತ್ತು ಸವಲತ್ತುಗಳನ್ನು ಪಡೆಯಬೇಕು ಎಂದು ಪ್ರಮುಖ ಬೇಡಿಕೆ ಇಟ್ಟುಕೊಂಡು ನೌಕರರು ಮುಷ್ಕರ ಮಾಡುತ್ತಿದ್ದಾರೆ.
ಎಂಎಸ್‌ಆರ್‌ಟಿಸಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶೇಖರ್ ಚನ್ನೆ ಈ ಸಂಬಂಧ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದುವರೆಗೆ 1, 532 ನೌಕರರು ಕೆಲಸ ಪುನರಾರಂಭಿಸಿದ್ದಾರೆ ಮತ್ತು ರಾಜ್ಯಾದ್ಯಂತ 17 ಸ್ಥಳಗಳಿಂದ 36 ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಇನ್ನು ಇವರೆಗೂ ಅಂದರೆ ಅಕ್ಟೋಬರ್ 28 ರಂದು ಮುಷ್ಕರ ಆರಂಭವಾದಾಗಿನಿಂದ ನಿಗಮಕ್ಕೆ ಸುಮಾರು 125 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ತಿಳಿಸಿದರು.
ಮತ್ತೆ ಮುಷ್ಕರ ಬೆಂಬಲಿಸದೆ ಕರ್ತವ್ಯಕ್ಕೆ ಮರಳುವ ನೌಕರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಯ ನೆರವು ಪಡೆಯಲಾಗುತ್ತಿದೆ ಎಂದು ಚನ್ನೆ ಹೇಳಿದರು.
ಮುಂಬೈ-ಸತಾರಾ, ದಾದರ್-ಪುಣೆ, ಸ್ವರ್ಗೇಟ್ (ಪುಣೆ)-ಥಾಣೆ, ನಾಸಿಕ್-ಪುಣೆ, ನಾಸಿಕ್-ಧುಲೆ, ಸೋಲಾಪುರ-ಅಕ್ಕಲಕೋಟ್ ಮತ್ತು ರಾಜಾಪುರ-ಬುರುಂಬೆವಾಡಿ ಸೇರಿ ಹಲವು ಮಾರ್ಗಗಳಲ್ಲಿ ಬಸ್‌ಗಳು ಓಡಾಡುತ್ತಿವೆ ಎಂದರು.
ಪುಣೆ ನಿಲ್ದಾಣ-ದಾದರ್ ಮಾರ್ಗದಲ್ಲಿ ಅತಿ ಹೆಚ್ಚು ಏಳು ಬಸ್‌ಗಳನ್ನು ಓಡಿಸಲಾಯಿತು. 36 ಬಸ್‌ಗಳಲ್ಲಿ 850ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದರೆ. ಆದರೆ, ಇತ್ತ ಸೋಮವಾರದಿಂದ ಎಂಎಸ್‌ಆರ್‌ಟಿಸಿಯ ಎಲ್ಲಾ 250 ಡಿಪೋಗಳ ಗೇಟ್‌ಗೆ ಬೀಗಜಡಿಯಲಾಗುವುದು ಎಂದು ನೌಕರರು ಎಚ್ಚರಿಕೆ ನೀಡಿದ್ದಾರೆ.
ಎಂಎಸ್‌ಆರ್‌ಟಿಸಿ ಕರಪತ್ರವನ್ನು ಬಿಡುಗಡೆ ಮಾಡಿದ್ದು, ನೌಕರರು ಮುಷ್ಕರವನ್ನು ತಕ್ಷಣವೇ ಕೈಬಿಡುವಂತೆ ಒತ್ತಾಯಿಸಿದ್ದಾರೆ. ನಿಗಮದ ನಷ್ಟವು 12,000 ಕೋಟಿ ರೂ.ಗೆ ಏರಿದೆ, ರಾಜ್ಯ ಸರ್ಕಾರದಿಂದ 3,549 ಕೋಟಿ ರೂಪಾಯಿ ಆರ್ಥಿಕ ನೆರವು ಪಡೆದು ಕಳೆದ 18 ತಿಂಗಳ ವೇತನವನ್ನು ಪಾವತಿಸಿದೆ ಎಂದು ಹೇಳಿದೆ. ಇನ್ನು ಸಕಾಲಕ್ಕೆ ವೇತನ ನೀಡಲು ಪ್ರಾಮಾಣಿಕ ಪ್ರಯತ್ನ ಮುಂದುವರಿಸುತ್ತೇವೆ’ ಎಂದು ನಿಗಮ ಭರವಸೆ ನೀಡಿದೆ.
ತುಟ್ಟಿಭತ್ಯೆ ಮತ್ತು ಮನೆ ಬಾಡಿಗೆ ಭತ್ಯೆ ಹೆಚ್ಚಳ ಮತ್ತು ನೌಕರರಿಗೆ ದೀಪಾವಳಿ ಉಡುಗೊರೆ ಮುಂತಾದ ಇತರ ಬೇಡಿಕೆಗಳ ಈಡೇರಿಕೆಯನ್ನು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಜತೆಗೆ ಮುಷ್ಕರದಿಂದ ಸಾಮಾನ್ಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಮತ್ತು MSRTC ಮುಷ್ಕರದಿಂದಾಗಿ ಪ್ರತಿದಿನ 15 ರಿಂದ 20 ಕೋಟಿ ರೂ. ನಷ್ಟವಾಗುತ್ತಿದೆ. ಇದು ದೀರ್ಘಾವಧಿಯ ಆರ್ಥಿಕ ಪರಿಣಾಮ ಬೀರಲಿದೆ ಎಂದು ನಿಗಮ ಎಚ್ಚರಿಕೆ ನೀಡಿದೆ.
ಅಧಿಕಾರಿಗಳ ಪ್ರಕಾರ, ಮುಷ್ಕರದಲ್ಲಿ ಭಾಗವಹಿಸಿದ್ದಕ್ಕಾಗಿ 2,053 ನೌಕರರನ್ನು ಅಮಾನತುಗೊಳಿಸಿದೆ. ಏತನ್ಮಧ್ಯೆ, MSRTC ನೌಕರರ ಗುಂಪು ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ನಾಲ್ಕನೇ ದಿನವೂ ಪ್ರತಿಭಟನೆಯನ್ನು ಮುಂದುವರಿಸಿದೆ.
ಸದ್ಯಕ್ಕೆ ಬಿಕ್ಕಟ್ಟನ್ನು ಕೊನೆಗೊಳಿಸಲು ಸರ್ಕಾರ ಮತ್ತು ಒಕ್ಕೂಟಗಳ ನಡುವೆ ಯಾವುದೇ ಸಭೆಯನ್ನು ನಿಗದಿಪಡಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಎಸ್‌ಆರ್‌ಟಿಸಿ ಬುಧವಾರ ಬಾಂಬೆ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದು, ಹೈಕೋರ್ಟ್ ಕಾನೂನುಬಾಹಿರವೆಂದು ಘೋಷಿಸಿದರೂ ಯೂನಿಯನ್‌ಗಳು ಮುಷ್ಕರವನ್ನು ಮುಂದುವರಿಸಿವೆ ಎಂದು ಹೇಳಿದ್ದಾರೆ.
ನ್ಯಾಯಾಲಯವು ಒಕ್ಕೂಟಗಳಿಂದ ಉತ್ತರವನ್ನು ಕೇಳಿದೆ ಮತ್ತು ನವೆಂಬರ್ 15 ರಂದು ವಿಚಾರಣೆ ನಡೆಸಲಿದೆ.