1ಸಾವಿರ ವರ್ಷಗಳ ನಂತರ ನ.19ರಂದು ಸಂಭವಿಸಲಿದೆ ಅತ್ಯಂತ ಸುದೀರ್ಘ ಚಂದ್ರಗ್ರಹಣ
ಬೆಂಗಳೂರು: ನವೆಂಬರ್ 19ರಂದು ಸಂಭವಿಸಲಿರುವ ಖಂಡಗ್ರಾಸ ಚಂದ್ರಗ್ರಹಣ 1 ಸಾವಿರ ವರ್ಷಗಳಲ್ಲೇ ಅತ್ಯಂತ ಸುದೀರ್ಘ ಗ್ರಹಣವಾಗಲಿದೆ. ಇಷ್ಟು ಸುದೀರ್ಘ ಚಂದ್ರಗ್ರಹಣ ಈ ಹಿಂದೆ 1440ರ ಫೆಬ್ರವರಿ 18ರಂದು ಸಂಭವಿಸಿತ್ತು.
ಈ ಬಾರಿ ಸಂಭವಿಸುವ ಚಂದ್ರಗ್ರಹಣದಷ್ಟು ಸುದೀರ್ಘ ಗ್ರಹಣವನ್ನು ಮುಂದೆ ನೋಡಬೇಕಿದ್ದರೆ ಜಗತ್ತು 2669ರ ಫೆಬ್ರವರಿ 8ರವರೆಗೆ ಕಾಯಬೇಕಾಗುತ್ತದೆ. ಕರಿ ನೆರಳು ಮತ್ತು ಈ ನಿರ್ದಿಷ್ಟ ಚಂದ್ರಗ್ರಹಣದ ಮೊದಲ ಹಂತದಲ್ಲಿ ಭೂಮಿಯ ತೆಳು ನೆರಳು ಚಂದ್ರನ ಮೇಲೆ ಬೀಳಲಿದ್ದು, ಇದರ ಗೋಚರತೆಯನ್ನು ಅಲ್ಪಪ್ರಮಾಣದಲ್ಲಿ ಮಾತ್ರ ಬದಲಾಯಿಸಲಿದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.
ಭಾರತದಲ್ಲಿ ಈ ಗ್ರಹಣ ಅತ್ಯಂತ ಅಲ್ಪಾವಧಿಯಲ್ಲಿ ಮಾತ್ರ ಗೋಚರಿಸಲಿದ್ದು, ಈ ಚಂದ್ರ ಗ್ರಹಣವು ಅಸ್ಸಾಮ್, ಅರುಣಾಚಲ ಪ್ರದೇಶ ಸೇರಿದಂತೆ ಈಶಾನ್ಯ ಭಾರತದ ಕೆಲವು ರಾಜ್ಯಗಳಲ್ಲಿ ಗೋಚರಿಸಲಿದೆ. “ಈ ಗ್ರಹಣದ ಖಂಡಗ್ರಾಸ ಹಂತ ನ.19ರಂದು ಮಧ್ಯಾಹ್ನ 12:48ಕ್ಕೆ ಆರಂಭವಾಗಲಿದ್ದು, ಸಂಜೆ 4:17ಕ್ಕೆ ಕೊನೆಗೊಳ್ಳಲಿದೆ ಎಂದು ವಿವರ ನೀಡಿದೆ.
ನವೆಂಬರ್ 18-19ರಂದು ಸಂಭವಿಸುವ ಗ್ರಹಣ ಈ ವರ್ಷದ ಕೊನೆಯ ಗ್ರಹಣವೂ ಆಗಿದೆ. ಮುಂದಿನ ಚಂದ್ರಗ್ರಹಣ 2022ರ ನವೆಂಬರ್ 8ರಂದು ಸಂಭವಿಸಲಿದ್ದು, ಇದು ಖಗ್ರಾಸ ಚಂದ್ರಗ್ರಹಣವಾಗಿರುತ್ತದೆ.
ಇನ್ನು ಈ ಶತಮಾನದ ಸುದೀರ್ಘ ಚಂದ್ರ ಗ್ರಹಣವು ನ.19ರಂದು ಘಟಿಸಲಿದ್ದು, ಈ ವಿಸ್ಮಯಕಾರಿ ಆಕಾಶ ಘಟನೆಯನ್ನು ಕಣ್ಣುತುಂಬಿಕೊಳ್ಳಲು ಖಗೋಳ ಶಾಸ್ತ್ರಜ್ಞರು, ಆಕಾಶ ಕಾಯ ವೀಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ.
ಹೀಗಾಗಿ ಈ ತಿಂಗಳ ಕಾರ್ತಿಕ ಪೂರ್ಣಿಮೆ ವಿಶೇಷವಾಗಿರಲಿದೆ. ಅಂದರೆ ನವೆಂಬರ್ 19 ಕಾರ್ತಿಕ ಪೂರ್ಣಿಮೆಯ ದಿನ ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರ ಗ್ರಹಣ ನಡೆಯಲಿದೆ. ನಮ್ಮ ರಾಜ್ಯದಲ್ಲಿ ಈ ಗ್ರಹಣ ಗೋಚರಿಸುವ ಬಗ್ಗೆ ಸ್ಪಷ್ಟತೆ ಇಲ್ಲ.
ಈಗಾಗಲೇ ಖಗೋಳಶಾಸ್ತ್ರಜ್ಞರು ಹಾಗೂ ಆಕಾಶ ಕಾಯವೀಕ್ಷಕರಲ್ಲಿ ಕುತೂಹಲ ಮನೆ ಮಾಡಿದ್ದು, ಸುದೀರ್ಘ ಚಂದ್ರಗ್ರಹಣ ಗಳಿಗೆಗಾಗಿ ಕಾಯುತ್ತಿದ್ದಾರೆ. ಇದೊಂದು ಅಪೂರ್ವ ಚಂದ್ರಗ್ರಹಣ ಎನಿಸಿಕೊಳ್ಳಲಿದೆ. ಕಾತ್ರಿಕ ಪೂರ್ಣಿಮೆಯಂದು ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಹಾದು ಹೋಗಲಿದೆ. ಆಗ ಚಂದ್ರನ ಮೇಲೆ ನೆರಳು ಮೂಡಲಿದ್ದು, ಅವಿಸ್ಮರಣೀಯ ಎನಿಸಿಕೊಳ್ಳಿದೆ.
ಮಧ್ಯಾಹ್ನ 1.30 ರ ನಂತರ ಚಂದ್ರಗ್ರಹಣವು ಪೂರ್ಣ ಪ್ರಮಾಣದಲ್ಲಿರಲಿದೆ. ಈ ಸಂದರ್ಭದಲ್ಲಿ ಭೂಮಿಯು 97 ಪ್ರತಿಶತದಷ್ಟು ಪೂರ್ಣ ಚಂದ್ರನನ್ನು ಸೂರ್ಯನ ಕಿರಣಗಳಿಂದ ಮರೆಮಾಡುತ್ತದೆ ಎಂದು ನಾಸಾ ಹೇಳಿದೆ.
ಈ ಅದ್ಭುತವಾದ ಆಕಾಶ ಘಟನೆಯ ಸಮಯದಲ್ಲಿ, ಚಂದ್ರನು ಕೆಂಪು ಬಣ್ಣವನ್ನು ಪಡೆಯುತ್ತಾನೆ. ಇದು ಭಾರತದ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ. ಹಾಗಾಗಿ, ಭಾರತದಲ್ಲೆಡೆಯೂ ಚಂದ್ರಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗದೇ ಹೋಗಬಹುದು. ಇದು ಅವಿಸ್ಮರಣೀಯ ಆಕಾಶ ಘಟನೆಯಾಗಲಿದೆ.
ಈ ಚಂದ್ರ ಗ್ರಹಣವು 3 ಗಂಟೆ 28 ನಿಮಿಷ ಹಾಗೂ 23 ಸೆಕೆಂಡುಗಳ ಕಾಲ ಇರಲಿದೆ. ಹಾಗಾಗಿಯೇ ಈ ಶತಮಾನದ ಸುದೀರ್ಘ ಚಂದ್ರ ಗ್ರಹಣ ಎನಿಸಿಕೊಳ್ಳಲಿದೆ. 2001ರಿಂದ 2100ವರೆಗಿನ ಅವಧಿಯಲ್ಲಿ ಇಷ್ಟು ಸುದೀರ್ಘವಾದ ಯಾವುದೇ ಚಂದ್ರ ಗ್ರಹಣ ಇರುವುದಿಲ್ಲ. ಹಾಗಾಗಿಯೇ ಇದನ್ನ ಶತಮಾನದ ಸುದೀರ್ಘ ಚಂದ್ರ ಗ್ರಹಣ ಎಂದು ಕರೆಯಲಾಗುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿಕೊಂಡಿದೆ.
21 ಶತಮಾನದಲ್ಲಿ ಭೂಮಿಯು ಒಟ್ಟು 228 ಚಂದ್ರ ಗ್ರಹಣಗಳಿಗೆ ಸಾಕ್ಷಿಯಾಗಲಿದೆ. ಹೆಚ್ಚಾಗಿ ತಿಂಗಳಲ್ಲಿ ಎರಡು ಚಂದ್ರಗ್ರಹಣಗಳು ಇರಲಿದ್ದು, ಕೆಲವೊಮ್ಮೆ ಮೂರು ಚಂದ್ರ ಗ್ರಹಣಗಳೂ ಕೂಡ ಆಗಬಹುದು ಎಂದು ನಾಸಾ ಅಭಿಪ್ರಾಯಪಟ್ಟಿದೆ.
ಉತ್ತರ ಅಮೆರಿಕದಲ್ಲಿ ಈ ಚಂದ್ರ ಗ್ರಹಣ ಪೂರ್ಣ ಪ್ರಮಾಣದಲ್ಲಿ ಗೋಚರವಾಗಲಿದೆ. ಇಲ್ಲಿನ ಜನರು ಪೂರ್ತಿಯಾಗಿ ಚಂದ್ರ ಗ್ರಹಣವನ್ನು ವೀಕ್ಷಿಸಬಹುದಾಗಿದೆ. ಅಮೆರಿಕದ 50 ರಾಜ್ಯಗಳು, ಮೆಕ್ಸಿಕೋದಲ್ಲಿ ಗೋಚರವಾಗಲಿದೆ. ಹಾಗೆಯೇ, ಆಸ್ಟ್ರೇಲಿಯಾ, ಉತ್ತರ ಯುರೋಪ್, ಪೆಸಿಫಿಕ್ ಒಸಿಯನ್ ಪ್ರದೇಶದಲ್ಲೂ ಶತಮಾನದ ಸುದೀರ್ಘ ಚಂದ್ರಗ್ರಹಣ ಗೋಚರವಾಗಲಿದೆ.