ಸಾರಿಗೆ ನೌಕರರ ಮುಷ್ಕರ: ಎಂಎಸ್‌ಆರ್‌ಟಿಸಿ ನೌಕರರ ಆತ್ಮಹತ್ಯೆಗೆ ಯತ್ನ ಆಸ್ಪತ್ರೆಗೆ ದಾಖಲು
ಪಾಲ್ಘರ್: ಸರ್ಕಾರಿ ನೌಕರರಾಗಿ ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ನಿಗಮದ ನೌಕರರು ಮುಷ್ಕರ ನಡೆಸುತ್ತಿದ್ದು, ಈ ನಡುವೆ ಸರ್ಕಾರಕ್ಕೆ ಎಚ್ಚರಿಕೆ ನೀಡಲು 30 ವರ್ಷದ ಎಂಎಸ್‌ಆರ್‌ಟಿಸಿ ಉದ್ಯೋಗಿಯೊಬ್ಬರು ಮಹಾರಾಷ್ಟ್ರದ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (MSRTC) ಪಾಲ್ಘರ್‌ನಲ್ಲಿರುವ ಜವಾಹರ್ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಚಾಲಕ ದೀಪಕ್ ಖೋರ್ಗಡೆ ಸರ್ಕಾರ ನಡೆಗೆ ಮನನೊಂದು ತಮ್ಮ ಮನೆಯಲ್ಲಿ ಭಾನುವಾರ ವಿಷ ಸೇವಿಸಿದ್ದು, ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಟುಂಬಸ್ಥರು ನೌಕರರನ್ನು ಜವ್ಹಾರ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಉದ್ಯೋಗಿ ಖಿನ್ನತೆಗೆ ಒಳಗಾಗಿದ್ದರು ಮತ್ತು ಅವರ ಭವಿಷ್ಯದ ಬಗ್ಗೆ ಚಿಂತಿಸಿ ಮುಂದೆ ಇದೇ ರೀತಿ ಸರ್ಕಾರ ನಡೆದುಕೊಂಡರೆ ಹೇಗೆ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕುಟುಂಬದವರು ಪೊಲೀಸ್ ಅಧಿಕಾರಿಗೆ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ತನಿಖೆ ನಡೆಸುತ್ತಿದ್ದು, ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಜವಾಹರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಪ್ಪಾಸಾಹೇಬ್ ಲೆಂಗ್ರೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು (MSRTC) ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸಬೇಕೆಂಬ ನೌಕರರ ಬೇಡಿಕೆಯನ್ನು ಪರಿಶೀಲಿಸಲು ಮಹಾರಾಷ್ಟ್ರ ಸರ್ಕಾರವು ಸಮಿತಿಯನ್ನು ರಚಿಸಿದೆ. ಆದರೆ, ಅದರ ಬಗ್ಗೆ ವಿಶ್ವಾಸವಿಲ್ಲ ಎಂದು ನೌಕರರು ಕಳೆದ ತಿಂಗಳಿನಿಂದ ಮುಷ್ಕರ ನಡೆಸುತ್ತಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ನಿಗಮವನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸಬೇಕು, ಇದರಿಂದಾಗಿ ಸರ್ಕಾರಿ ನೌಕರರ ಸ್ಥಾನಮಾನ ಮತ್ತು ಪ್ರಯೋಜನಗಳನ್ನು ಪಡೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ.