ವಿಜಯಪಥ ಸಮಗ್ರ ಸುದ್ದಿ
ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದ ಮುನಿಸಿಪಲ್ ಕಾರ್ಪೋರೇಷನ್ ನಡೆಸುವ ಇಂದಿರಾಗಾಂಧಿ ರುಗ್ನಾಲಯ ಆಸ್ಪತ್ರೆಯಲ್ಲಿ 85 ವರ್ಷದ RSS ಕಾರ್ಯಕರ್ತರಾಗಿರುವ ನಾರಾಯಣರಾವ್ ದಾಭಾಡ್ಕರ್ ಎಂಬ ವೃದ್ದರೊಬ್ಬರು ತನಗೆ ಕೋವಿಡ್ ಸೋಂಕು ತಗುಲಿದ್ದರೂ ಸಹ ಅಲ್ಲಿದ್ದ ಮತ್ತೊಬ್ಬ 40 ವರ್ಷದ ಕೊರೊನಾ ಪೀಡಿತ ಯುವಕನಿಗೆ ತನ್ನ ಬೆಡ್ ಬಿಟ್ಟು ಕೊಟ್ಟು ಮನೆಗೆ ತೆರಳಿದ್ದರು. ಆದರೆ ಮೂರು ದಿನದ ನಂತರ ಮರಣ ಹೊಂದಿದ್ದರು. ಅವರ ಮಾನವೀಯತೆಯನ್ನು ಮರೆಯದಿರೋಣ ಎಂಬ ಸಂದೇಶವು ಕಳೆದ ನಾಲ್ಕೈದು ದಿನಗಳಿಂದ ವೈರಲ್ ಆಗುತ್ತಿದೆ.
ಬಿಜೆಪಿ ಪರ ವೆಬ್‌ಸೈಟ್ Opindia ಸೇರಿದಂತೆ ಹಲವು ಪತ್ರಿಕೆಗಳು ಈ ಸುದ್ದಿಯನ್ನು ಬಿತ್ತರಿಸಿದ್ದವು. ನಂತರ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದರು. ಆರ್‌ಎಸ್‌ಎಸ್ ಹೇಳಿಕೆಯನ್ನು ಬಿಡುಗಡೆ ಮಾಡಿ ಆ ವೃದ್ದನನ್ನು ಹೊಗಳಿತ್ತು.
ಆದರೆ ಆಸ್ಪತ್ರೆ ಸಿಬ್ಬಂದಿ ಏನು ಹೇಳುತ್ತಾರೆ ಗೊತ್ತಾ?
85 ವರ್ಷದ ನಾರಾಯಣರಾವ್ ದಾಭಡ್ಕರ್ ಅವರು ವೈದ್ಯಕೀಯ ಸಲಹೆಯ ವಿರುದ್ಧವಾಗಿ ಡಿಸ್ಚಾರ್ಜ್ ಮಾಡಿಸಿಕೊಂಡಿದ್ದು ನಿಜ, ಆದರೆ ಅವರು ಬೇರೊಬ್ಬರಿಗಾಗಿ ಹಾಸಿಗೆಯನ್ನು ಬಿಟ್ಟುಕೊಟ್ಟಿದ್ದಾರೆ ಎಂಬ ಹೇಳಿಕೆಯ ಬಗ್ಗೆ ಯಾವುದೇ ಸಾಕ್ಷಿ ಮತ್ತು ಸ್ಪಷ್ಟತೆ ಇಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿರುವ ಬಗ್ಗೆ ನಾನು ಗೌರಿಯಲ್ಲಿ ಸವಿವರವಾಗಿ ವರದಿಯಾಗಿದೆ.
ನಾಗ್ಪುರದ ಇಂದಿರಾ ಗಾಂಧಿ ಆಸ್ಪತ್ರೆಯ ಇನ್ಚಾರ್ಜ್ ವೈದ್ಯರಾದ ಶೀಲು ಚಿಮುರ್ಕರ್, ಏಪ್ರಿಲ್ 22 ರಂದು ಸಂಜೆ 5.55 ಕ್ಕೆ ದಾಭಡ್ಕರ್ ಅವರನ್ನು ದಾಖಲಿಸಲಾಯಿತು ಮತ್ತು ತುರ್ತುಚಿಕಿತ್ಸೆಯ ವಾರ್ಡ್‌ನಲ್ಲಿ ಬೆಡ್ ಸಿಕ್ಕಿತು. ಅವರ ಸ್ಥಿತಿ ಹದಗೆಟ್ಟರೆ ಅವರನ್ನು ಉನ್ನತ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಗುತ್ತದೆ ಎಂದು ನಾವು ಅವರ ಸಂಬಂಧಿಕರಿಗೆ ತಿಳಿಸಿದ್ದೆವು. ಆದರೆ ಅವರು ಸಂಜೆ 7.55 ಕ್ಕೆ ಡಿಸ್ಚಾರ್ಜ್ ಮಾಡಲು ಕೋರಿದರು. ಆದರೆ ಅವರನ್ನು ಉನ್ನತ ಆಸ್ಪತ್ರೆಗೆ ಕರೆದೊಯ್ಯಬೇಕೆಂದು ಅವರಿಗೆ ಸಲಹೆ ನೀಡಿದೆವು. ಅವರ ಅಳಿಯ ಅಮೋಲ್ ಪಚ್ಪೋರ್ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ನಂತರ, ನಾವು ಅವರಿಗೆ ವೈದ್ಯಕೀಯ ಸಲಹೆ ವಿರುದ್ಧ ಡಿಸ್ಚಾರ್ಜ್ ಮಾಡಿದೆವು ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಅವರು ಬೇರೊಬ್ಬರಿಗೆ ಬೆಡ್ ನೀಡಲು ಡಿಸ್ಚಾರ್ಜ್ ಆದರೆ ಎಂದು ಕೇಳಿದಾಗ “ಆ ದಿನ ಕರ್ತವ್ಯದಲ್ಲಿದ್ದ ನಮ್ಮ ಸಿಬ್ಬಂದಿ ಅಂತಹ ಯಾವುದೇ ಘಟನೆಗೆ ಸಾಕ್ಷಿಯಾಗಿಲ್ಲ” ಎಂದು ಚಿಮುರ್ಕರ್ ಹೇಳಿದ್ದಾರೆ.
ಇನ್ನು ಮುಂದುವರಿದು ವಿಷಯ ತಿಳಿಸಿದ ಅವರು, 110 ಕೋವಿಡ್ ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಯಲ್ಲಿ 92 ಸಕ್ರಿಯ ಹಾಸಿಗೆಗಳಿದ್ದು, ಉಳಿದವುಗಳನ್ನು ಉದ್ದೇಶಿತ ತೀವ್ರ ನಿಗಾ ಘಟಕಕ್ಕೆ ಇಡಲಾಗಿದೆ. ಆ ದಿನ ಆಸ್ಪತ್ರೆಯಲ್ಲಿ ಬೇರೆ ಹಾಸಿಗೆ ಲಭ್ಯವಿರಲಿಲ್ಲವೇ ಎಂದು ಕೇಳಿದಾಗ, “ನಾವು ಪ್ರತಿದಿನ ಕನಿಷ್ಠ ನಾಲ್ಕೈದು ಖಾಲಿ ಹಾಸಿಗೆಗಳನ್ನು ಹೊಂದಿದ್ದೆವು” ಎಂದು ಚಿಮುರ್ಕರ್ ಹೇಳಿದ್ದಾರೆ.
ಆ ನಂತರ ದಿ ಇಂಡಿಯನ್ ಎಕ್ಸ್ ಪ್ರೆಸ್ ವತಿಯಿಂದ ದಾಭಡ್ಕರ್ ಅಳಿಯ ಅಮೋಲ್ ಪಚ್ಪೋರ್‌ಗೆ ಕರೆ ಮಾಡಿದಾಗ, ನಾನೀಗ ಮಾತನಾಡುವ ಸ್ಥಿತಿಯಲ್ಲಿಲ್ಲ, ಏಕೆಂದರೆ ನಾನು ಸಹ ಕೋವಿಡ್ ಪಾಸಿಟಿವ್ ಆಗಿದ್ದೇನೆ. ಅಂದು ನಡೆದಿದ್ದು ಸರಿಯಾಗಿದೆ. ಅವರು ಇನ್ನೊಬ್ಬರಿಗೆ ಸಹಾಯ ಮಾಡುವ ವ್ಯಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈಗ ಮಾತನಾಡಲು ಏನಿದೆ? ಅವರು ಮರಣ ಹೊಂದಿ ನಾಲ್ಕು ದಿನಗಳು ಕಳೆದಿವೆ. ಏನಿದೆಯೋ ಅದು ಸತ್ಯ. ಇಷ್ಟು ಮಾತ್ರ ನಾನು ಹೇಳಬಲ್ಲೆ, ಇನ್ನು ಮುಂದೆ ನಾನು ಮಾತನಾಡಲಾರೆ ಎಂದಿದ್ದಾರೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಅವರು ಬೇರೊಬ್ಬರಿಗಾಗಿ ಬೆಡ್ ಬಿಟ್ಟು ಕೊಟ್ಟರು ಎಂಬುದರಲ್ಲಿ ಹಲವು ಪ್ರಶ್ನೆಗಳು ಎದ್ದಿವೆ. ಅಲ್ಲದೇ ಪ್ರತಿದಿನ ನಾಲ್ಕೈದು ಬೆಡ್‌ಗಳು ಖಾಲಿ ಇದ್ದವು ಎಂದು ನಾಗ್ಪುರದ ಇಂದಿರಾ ಗಾಂಧಿ ಆಸ್ಪತ್ರೆಯ ಇನ್ಚಾರ್ಜ್ ವೈದ್ಯರಾದ ಶೀಲು ಚಿಮುರ್ಕರ್ ಹೇಳಿರುವುದು ಮೇಲಿನ ಆರ್‌ಎಸ್‌ಎಸ್ ಪ್ರತಿಪಾದನೆಗೆ ವಿರುದ್ಧವಾಗಿದೆ. ಈ ಕುರಿತು ದಾಭಡ್ಕರ್ ಅಳಿಯ ಅಮೋಲ್ ಪಚ್ಪೋರ್ ಸಹ ಸ್ಪಷ್ಟವಾಗಿ ಮಾತನಾಡಿಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಹಲವು ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನಾಗ್ಪುರದ ಇಂದಿರಾ ಗಾಂಧಿ ಜಿಲ್ಲಾಸ್ಪತ್ರೆಯ ಅಧೀಕ್ಷಕರಾಗಿರುವ ಅಜಯ್ ಪ್ರಸಾದ್ ಎಂಬುವವರಿಗೆ ಸಾಮಾಜಿಕ ಕಾರ್ಯಕರ್ತನೊಬ್ಬ ಫೋನ್ ಮಾಡಿ ಮಾತಾಡಿದ್ದಾಗಿಯೂ ಹಲವೆಡೆ ವರದಿಯಾಗಿದೆ. ಅದರಲ್ಲಿ ಅವರು ಇನ್ನೊಬ್ಬರಿಗಾಗಿ ಬೆಡ್ ಬಿಟ್ಟುಕೊಡುವ ಪದ್ದತಿ ನಮ್ಮಲ್ಲಿ ಇಲ್ಲ ಮತ್ತು ಆ ಅಧಿಕಾರವೂ ರೋಗಿಗಳಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.