ವಿಜಯಪಥ ಸಮಗ್ರ ಸುದ್ದಿ
ವಾಷಿಂಗ್ಟನ್: ಭಾರತದಲ್ಲಿ ಕೋವಿಡ್-19 ಭಾರಿ ಹಾನಿಯನ್ನುಂಟು ಮಾಡುತ್ತಿದ್ದು ಈ ಪಿಡುಗಿನಿಂದ ಸಂಭವಿಸುತ್ತಿರುವ ಸಾವು-ನೋವಿನ ವರದಿಗಳು ಭಯಾನಕ ಹಾಗೂ ಹೃದಯ ಹಿಂಡುವಂತಿವೆ ಎಂದು ಅಮೆರಿಕದ ಸರ್ಜನ್ ಜನರಲ್ ಆಗಿರುವ ಭಾರತ ಮೂಲದ ಡಾ.ವಿವೇಕ್ ಮೂರ್ತಿ ಆತಂಕ ವ್ಯಕ್ತಪಡಿಸಿದ್ದಾರೆ.
ಎರಡನೇ ಬಾರಿಗೆ ದೇಶದ ವೈದ್ಯಕೀಯ ಸೇವೆಯ ಅತ್ಯುನ್ನತ ಹುದ್ದೆಗೇರಿದ ಹೆಗ್ಗಳಿಕೆ ಹೊಂದಿರುವ ಡಾ.ವಿವೇಕ್ ಮೂರ್ತಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಕೊರೊನಾದಿಂದಾಗಿ ತಮ್ಮ ಕುಟುಂಬದ ಏಳು ಜನರನ್ನು ನಾವು ಕಳೆದುಕೊಂಡಿದ್ದೇವೆ. ಈ ಸ್ಥಿತಿ ಯಾರಿಗೂ ಬರಬಾರದು ಎಂದರು.
ಭಾರತದಲ್ಲಿರುವ ನಮ್ಮ ಕುಟುಂಬದ ಸದಸ್ಯರೊಂದಿಗೆ ನಿತ್ಯವೂ ಮಾತನಾಡುತ್ತಿರುವೆ ಅವರು ಬಹಳಷ್ಟು ಯಾತನೆ ಅನುಭವಿಸುತ್ತಿದ್ದಾರೆ. ಇಂಥ ಸ್ಥಿತಿ ಇನ್ನೆಂದೂ ಬರದಿರಲಿ ಎಂದೇ ಎಲ್ಲರೂ ಪ್ರಾರ್ಥಿಸುವಂತಾಗಿದೆ ಎಂದು ಹೇಳಿದರು.
ನಿತ್ಯ 3.5 ಲಕ್ಷಕ್ಕೂ ಅಧಿಕ ಜನರು ಸೋಂಕಿಗೆ ಒಳಗಾಗುತ್ತಿದ್ದು ರೋಗಿಗಳಿಂದ ಆಸ್ಪತ್ರೆಗಳು ತುಂಬಿಹೋಗಿವೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಆಗುತ್ತಿಲ್ಲ. ತೀವ್ರವಾಗಿ ಅಸ್ವಸ್ಥರಾದವರಿಗೆ ಆಮ್ಲಜನಕ ಪೂರೈಕೆ ಅಸಾಧ್ಯವಾಗಿದೆ. ಬಹಳ ಸಂಕಷ್ಟದ ಪರಿಸ್ಥಿತಿ ಮನೆಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಕಷ್ಟದ ಈ ಸಮಯದಲ್ಲಿ ಭಾರತಕ್ಕೆ ಅಮೆರಿಕ ನೆರವು ನೀಡಲು ಮುಂದಾಗಿರುವುದು ತುಸು ಸಮಾಧಾನ ತಂದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇನ್ನು ದೇಶದಲ್ಲಿ ಜನರು ಜಾಗರೂಕತೆ ವಹಿಸಬೇಕು. ಇದರಿಂದ ರಕ್ಷಿಸಿಕೊಳ್ಳಲು ಮಾಸ್ಕ್, ಸ್ಯಾನಿಟೈಸ್ ಕಡ್ಡಾಯವಾಗಿ ಮಾಡಿಕೊಂಡು ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎಂಬ ಧ್ಯೇಯವಾಕ್ಯವನ್ನು ಪಾಲಿಸಬೇಕೆಂದು ಮನವಿ ಮಾಡಿದರು.