ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವ ಕಲಾಪಗಳ ನೇರ ಪ್ರಸಾರ ಮಾಡಬೇಕು ಎಂಬ ಪ್ರಸ್ತಾವವನ್ನು ನಾನು ಗಂಭೀರವಾಗಿ ಪರಿಗಣಿಸುತ್ತಿದ್ದೇನೆ ಎಂದು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ.
ಗುರುವಾರ ಆಯೋಜಿಸಿದ್ದ ವರ್ಚುವಲ್ ಮೂಲಕ ನಡೆಸುವ ಕಲಾಪಗಳನ್ನು ಮಾಧ್ಯಮ ಪ್ರತಿನಿಧಿಗಳೂ ವೀಕ್ಷಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಿರುವ ಆ್ಯಪ್ ಅನಾವರಣ ಸಮಾರಂಭ ಉದ್ದೇಶಿಸಿ ವರ್ಚುವಲ್ ಮೂಲಕ ಮಾತನಾಡಿ, ಕಲಾಪಗಳ ನೇರ ಪ್ರಸಾರವನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರುವ ಮುನ್ನ, ಸುಪ್ರೀಂಕೋರ್ಟ್‌ನ ಸಹೋದ್ಯೋಗಿಗಳಲ್ಲಿ ಒಮ್ಮತ ಮೂಡಿಸಬೇಕು. ಈ ನಿಟ್ಟಿನಲ್ಲಿ ಪ್ರಯತ್ನಿಸುವೆ ಎಂದರು.
ಇದೇ ವೇಳೆ ತಾವು ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ದಿನಗಳನ್ನು ಮೆಲುಕು ಹಾಕಿದ ಎನ್.ವಿ. ರಮಣ, “ನಾನು ಸ್ವಲ್ಪ ಸಮಯದವರೆಗೆ ಪತ್ರಕರ್ತನಾಗಿದ್ದೆ. ಆ ಸಮಯದಲ್ಲಿ ನಮ್ಮಲ್ಲಿ ಕಾರು ಅಥವಾ ಬೈಕು ಇರಲಿಲ್ಲ. ಈವೆಂಟ್ ಆಯೋಜಕರಿಗೆ ಸಾರಿಗೆ ವ್ಯವಸ್ಥೆ ಮಾಡದಂತೆ ನಿರ್ದೇಶಿಸಲ್ಪಟ್ಟಿದ್ದರಿಂದ ನಾವು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆವು” ಎಂದರು.
ಕೋರ್ಟ್ ಕಲಾಪಗಳ ಕುರಿತು ವರದಿ ಮಾಡುವಾಗ ಪತ್ರಕರ್ತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಅದು ನನ್ನ ಅರಿವಿಗೆ ಬಂದಿತ್ತು. ಮಾಹಿತಿಗಾಗಿ ಬಹಳಷ್ಟು ಸಂದರ್ಭಗಳಲ್ಲಿ ಅವರು ವಕೀಲರ ಮೇಲೆಯೇ ಅವಲಂಬಿತರಾಗಿರಬೇಕಾಗುತ್ತಿತ್ತು ಎಂದರು.
ಸುಪ್ರೀಂಕೋರ್ಟ್‌ನ ಸಿಬ್ಬಂದಿಯೇ ಈ ಆ್ಯಪ್‌ನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈ ಕಾರ್ಯದಲ್ಲಿ ತೊಡಗಿದ್ದ ಆರು ಜನರಿಗೆ ಕೋವಿಡ್–19 ದೃಢಪಟ್ಟಿದೆ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ತಿಳಿಸಿದರು.