ಬೆಂಗಳೂರು: ಕೆನಡಾದ ಬರ್ನಾಬಿ ನಗರವು ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಗೌರವಾರ್ಥ ಸೆ.5 ಅನ್ನು ʻಗೌರಿ ಲಂಕೇಶ್ ದಿನʼ ಎಂದು ಘೋಷಿಸಿದೆ.
ಗೌರಿ ಲಂಕೇಶ್ ಹತ್ಯೆಯಾಗಿ ಇದೇ ಸೆ.5ಕ್ಕೆ ನಾಲ್ಕು ವರ್ಷಗಳು ತುಂಬಲಿವೆ. ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಬರ್ನಾಬಿ ನಗರವು ಈ ನಿರ್ಧಾರವನ್ನು ಘೋಷಿಸಿದೆ.
ನಗರದ ಮೇಯರ್ ಮೈಕ್ ಹರ್ಲಿ ಅವರು ಹೊರಡಿಸಿರುವ ಘೋಷಣಾ ಪತ್ರದಲ್ಲಿ, ʻಧೈರ್ಯಶಾಲಿ ಭಾರತೀಯ ಪತ್ರಕರ್ತೆ ಗೌರಿ ಲಂಕೇಶ್ ಸತ್ಯ ಮತ್ತು ನ್ಯಾಯದ ಪರವಾಗಿ ನಿಂತರು. ದಮನದ ವಿರುದ್ಧ ಮತ್ತು ಮಾನವ ಹಕ್ಕುಗಳ ಹೋರಾಟದಲ್ಲಿ ಅವರು ತಮ್ಮ ಜೀವವನ್ನೆ ಅರ್ಪಿಸಿದರುʼ ಎಂದು ಹೇಳಿದ್ದಾರೆ.
ಅಕ್ಟೋಬರ್ 8, 2018 ರಂದು ಫ್ರಾನ್ಸ್‌ನ ಬೈಯಕ್ಸ್-ಕ್ಯಾಲ್ವಾಡೋಸ್ ಪ್ರಶಸ್ತಿಯನ್ನು ಗೌರಿ ಲಂಕೇಶ್ ಅವರಿಗೆ ಮರಣೋತ್ತರವಾಗಿ ನೀಡಿ ಗೌರವಿಸಲಾಗಿತ್ತು.
2017ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ನಿವಾಸದ ಮುಂದೆ ಗೌರಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.