ನ್ಯೂಡೆಲ್ಲಿ: ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದ ಪರೀಕ್ಷೆ ಬರೆದಿದ್ದು, ಶೀಘ್ರವೇ ಫಲಿತಾಂಶ ಹೊರಬೀಳಲಿದೆ’ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ದೆಹಲಿಗೆ ದೌಡಾಯಿಸಿದ್ದಾರೆ.
ಶುಕ್ರವಾರ ತಡರಾತ್ರಿ ದೆಹಲಿಗೆ ಹೋಗಿರುವ ಅವರು ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡದೆ ಖಾಸಗಿ ಹೋಟೆಲ್‌ನಲ್ಲಿದ್ದಾರೆ. ನಾಯಕತ್ವ ಬದಲಾವಣೆ ಕುರಿತು ಒತ್ತಡ ಹೇರುವ ನಿಟ್ಟಿನಲ್ಲಿ ಕೆಲವು ಮುಖಂಡರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಶನಿವಾರ ಮಧ್ಯಾಹ್ನ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ವೈಯಕ್ತಿಕ ಕೆಲಸಗಳ ಹಿನ್ನೆಲೆಯಲ್ಲಿ ದೆಹಲಿಗೆ ಬಂದಿದ್ದು, ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.
ಪ್ರತಿ ಬಾರಿ ನಾನು ದಿಲ್ಲಿಗೆ ಬಂದಾಗ ರಾಜಕೀಯ ಸ್ಪರ್ಶ ನೀಡಲಾಗುತ್ತದೆ. ಆದರೆ, ಈಗ ವೈಯಕ್ತಿಕ ಕೆಲಸಕ್ಕೆ ಬಂದಿದ್ದು, ರಾಜಕೀಯ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಇಂದು ಸಂಜೆಯೇ ಯೋಗೇಶ್ವರ್ ಬೆಂಗಳೂರಿಗೆ ತೆರಳಿದರು.
ಮತ್ತೊಂದು ಬೆಳವಣಿಗೆಯಲ್ಲಿ ಕಾಕತಾಳೀಯ ಎಂಬಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರೂ ದೆಹಲಿಗೆ ಭೇಟಿನೀಡಿದ್ದು, ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಬಂದಿರುವುದಾಗಿ ತಿಳಿಸಿದರು.
ಆದರೆ, ಯೋಗೇಶ್ವರ ಬಂದಿರುವ ಬಗ್ಗೆ ಮಾಹಿತಿ ಇಲ್ಲ ಎಂದ ಅವರು, ಪಕ್ಷ ಸಂಘಟನೆ ಕುರಿತು ವರಿಷ್ಠರು ಹಮ್ಮಿಕೊಂಡಿರುವ ಸಭೆಯಲ್ಲಿ ಭಾಗವಹಿಸುವೆ’ ಎಂದು ಹೇಳಿದರು.
ಇನ್ನು ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿದ್ದೇನೆ’ ಎಂಬ ಸಿಪಿವೈ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪರೀಕ್ಷೆ ಬರೆದವರ ಬಳಿಯೇ ಫಲಿತಾಂಶ ಏನಾಯಿತು ಎಂದು ಕೇಳಬೇಕು. ಅವರು ಯಾವ ಹಿನ್ನೆಲೆಯಲ್ಲಿ ಆ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ನಾನು ಯೋಗೇಶ್ವರ್ ಜತೆ ಬಂದಿಲ್ಲ ಎಂದು ತಿಳಿಸಿದರು.