ಕಾಬೂಲ್: ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳ ಅಟ್ಟಹಾಸ ಇನ್ನೂ ನಿಂತಿಲ್ಲ. ಭಾರತದ ರಾಜತಾಂತ್ರಿಕ ಕಚೇರಿಯಲ್ಲಿ ಮಹತ್ವದ ದಾಖಲೆಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ರಾಜತಾಂತ್ರಿಕ ಕಚೇರಿಯಲ್ಲಿದ್ದ ವಾಹನಗಳನ್ನು ಅವರು ವಶಪಡಿಸಿಕೊಂಡಿದ್ದು ಮಹತ್ವದ ದಾಖಲೆಗಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಹೆರತ್ ಮತ್ತು ಕಂದಹಾರ್‌ನಲ್ಲಿರುವ ಎರಡು ರಾಜತಾಂತ್ರಿಕ ಕಚೇರಿಯಲ್ಲಿ ತೀವ್ರ ಶೋಧ ನಡೆಸಿದ್ದಾರೆ. ಭಾರತದ 450 ಮಂದಿ ಇನ್ನು ಅಲ್ಲೆ ಇದ್ದು ಅವರ ಸ್ಥಿತಿ ಅತಂತ್ರವಾಗಿದೆ. ಅವರನ್ನು ಕರೆತರಲು ಸರ್ಕಾರಕ್ಕೆ ಸವಾಲಾಗಿದೆ.
ಅಮೆರಿಕ ಮತ್ತು ಇತರ ರಾಯಭಾರ ಕಚೇರಿಯ ಮೂಲಕ ಅವರನ್ನು ಕರೆಸಿಕೊಳ್ಳುವಲ್ಲಿ ವಿದೇಶಾಂಗ ಸಚಿವಾಲಯ ಪ್ರಯತ್ನ ನಡೆಸಿದೆ. ಅಲ್ಲಿನ ಭಾರತೀಯರನ್ನು ವಿಮಾನ ನಿಲ್ದಾಣದವರೆಗೂ ಕರೆತರುವುದು ಬಹಳ ಕಷ್ಟದಾಯಕವಾಗಿದೆ.
ಪ್ರತಿ ಚೆಕ್ ಪೋಸ್ಟ್‌ನಲ್ಲೂ ಬಂದೂಕುಧಾರಿ ತಾಲಿಬಾನಿಗಳು ತಪಾಸಣೆ ನಡೆಸುತ್ತಿದ್ದಾರೆ. ಅವರ ಒಪ್ಪಿಗೆ ಇಲ್ಲದೆ ಕಾಬೂಲನ್ನು ಬಿಟ್ಟು ಹೊರ ಬರಲಿಕ್ಕಾಗದೇ ಭಾರತೀಯರು ಮನೆಯೊಳಗೆ ಯಾತನೆ ಅನುಭವಿಸುತ್ತಿದ್ದಾರೆ.
ಕಾಬೂಲ್ ಏರ್‌ಪೋರ್ಟ್ ನಿಂದ ಭಾರತದ ರಾಯಭಾರ ಕಚೇರಿ ಹತ್ತು ಕಿಮೀ ದೂರ ಇದೆ. ಸದ್ಯಕ್ಕೆ ಏರ್‌ಪೋರ್ಟ್ ಸುತ್ತ ಅಮೆರಿಕ ಸೈನಿಕರ ಪಹರೆ ಇದೆ. ಆದರೆ ಏರ್ಪೋರ್ಟ್ ಬಿಟ್ಟು ಉಳಿದ ಕಡೆ ಅವರು ಇಲ್ಲ.
ಹಾಗಾಗಿ ತಾಲಿಬಾನಿಗಳ ಕಣ್ತಪ್ಪಿಸಿ ಬರಲು ಬಹಳ ಕಷ್ಟ. ಹೀಗಾಗಿ ತಾಲಿಬಾನಿಗಳ ಸ್ಥಳೀಯ ನಾಯಕರನ್ನು ಸಂಪರ್ಕಿಸುವುದು ಸವಾಲಾಗಿದೆ ಎಂದು ವರದಿಯಾಗಿದೆ. ಅದೂ ಅಲ್ಲದೆ ತಾಲಿಬಾನ್ ವಿರುದ್ಧ ಹೋರಾಡಿದ್ದ ಆಫ್ಘನ್‍ನ ಗುಪ್ತಚರ ಸಂಸ್ಥೆ ಸೈನಿಕರನ್ನು ತಾಲಿಬಾನಿಗಳು ಮನೆ ಮನೆಯಲ್ಲೂ ಹುಡುಕುತ್ತಿದ್ದಾರೆ. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.