ಪೋರ್ಟ್-ಔ-ಪ್ರಿನ್ಸ್: ದ್ವೀಪರಾಷ್ಟ್ರ ಹೈಟಿಯ ನೈರುತ್ಯ ಭಾಗದಲ್ಲಿ ಶನಿವಾರ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಸತ್ತವರ ಸಂಖ್ಯೆ 1,300ಕ್ಕೇರಿದೆ. ಗಾಯಾಳುಗಳಲ್ಲಿ ಅನೇಕರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಪ್ರಕೃತಿ ವಿಕೋಪದಲ್ಲಿ 5,700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉರುಳುಬಿದ್ದ ಕಟ್ಟಡಗಳ ಭಗ್ನಾವಶೇಷಗಳಡಿ ಅನೇಕರು ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಯುದ್ಧೋಪಾದಿಯಲ್ಲಿ ಸಾಗಿವೆ.
ರಾಜಧಾನಿ ಪೋರ್ಟ್-ಔ-ಪ್ರಿನ್ಸ್‌ನಿಂದ 150 ಕಿ.ಮೀ. ದೂರದಲ್ಲಿರುವ ಪೆಟಿಟ್ ಟ್ರೌ ಡಿ ನಿಪ್ಪಲ್ಸ್ ಮತ್ತು ಸೇಂಟ್-ಲೂಯಿಸ್-ಡು-ಸುಡ್ ಪಟ್ಟಣಗಳಲ್ಲಿ ಭೂಕಂಪದಿಂದಾಗಿ 1,000ಕ್ಕೂ ಹೆಚ್ಚು ಮನೆಗಳು ಉರುಳಿ ಬಿದ್ದಿವೆ. ಅನೇಕ ಆಸ್ಪತ್ರೆಗಳು, ಚರ್ಚ್‌ಗಳು ಮತ್ತು ಶಾಲೆಗಳಿಗೂ ಹಾನಿಯಾಗಿವೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 7.2ರಷ್ಟಿತ್ತು.
ಹೈಟಿ ಪ್ರಧಾನಮಂತ್ರಿ ಏರಿಯಲ್ ಹೆನ್ರಿ ಕೆರಿಬಿಯನ್ ಈಗಾಗಲೇ ದ್ವೀಪ ರಾಷ್ಟ್ರದಲ್ಲಿ ಒಂದು ತಿಂಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.