ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಇನ್‍ಸ್ಟಾಗ್ರಾಂ ನಲ್ಲಿ ಹೃದಯ ತಜ್ಞ ಎಂದು ಮಹಿಳೆಗೆ ಪರಿಚಯ ಮಾಡಿಕೊಂಡ ನಕಲಿ ವೈದ್ಯನೊಬ್ಬ ಆಕೆಗೆ 80 ಲಕ್ಷ ರೂ. ವಂಚಿಸಿರುವುದು ನಗರದ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
50 ವರ್ಷದ ವಿಧವೆ ಮಹಿಳೆ, ಇನ್‍ಸ್ಟಾಗ್ರಾಂ ನಲ್ಲಿ ಹೃದಯ ತಜ್ಞರನ್ನು ಹುಡುಕುವಾಗ ಆರೋಪಿ ಮಾರ್ಬಿಸ್ ಹಾರ್ಮನ್ ಪರಿಚಯವಾಗಿದೆ. ಮಹಿಳೆಗೆ ಹೃದಯ ಸಂಬಂಧ ಕಾಯಿಲೆ ಇದ್ದಿದ್ದರಿಂದ ಇನ್‍ಸ್ಟಾಗ್ರಾಂ ನಲ್ಲಿ ವೈದ್ಯರು ಹುತ್ತಿದ್ದಾಗ ಹಾರ್ಮನ್ ಪ್ರೋಫೈಲ್ ಸಿಕ್ಕಿದೆ. ನಂತರ ವಾಟ್ಸ್‌ಆಪ್‌ಗೆ ಲಿಂಕ್ ಆಗಿ, ಈ ವೇಳೆ ಪರಿಚಯವಾಗಿ ಕಾಯಿಲೆ ಬಗ್ಗೆ ಮಹಿಳೆ ತಿಳಿಸಿದ್ದಾರೆ. ಆಗ ಯಾವಯಾವ ಔಷಧ ತೆಗೆದುಕೊಳ್ಳಬೇಕು ಎಂಬ ಸಲಹೆ ನೀಡುತ್ತೇನೆ ಎಂದು ನಕಲಿ ವೈದ್ಯ ಮಹಿಳೆಗೆ ನಂಬಿಸಿದ್ದಾನೆ.
ಕೆಲ ದಿನಗಳ ನಂತರ ಆ ಮಹಿಳೆಗೆ ಈ ನಕಲಿ ವೈದ್ಯ ಯುಕೆಯಿಂದ ಕರೆನ್ಸಿ ಹಾಗೂ ಗಿಫ್ಟ್ ಕಳಿಸಿದ್ದ. ಎರಡು ದಿನಗಳ ನಂತರ ಕಸ್ಟಮ್ಸ್ ಅಧಿಕಾರಿಗಳು ಎಂದು ಹೇಳಿ ಮಹಿಳೆಗೆ ಕರೆ ಹೋಗಿದೆ. ನೀವು ಗಿಫ್ಟ್ ಸ್ವೀಕರಿಸಿಲ್ಲ, ವಿತ್ತ ಸಚಿವಾಲಯದಿಂದ ನೋಟಿಸ್ ಬಂದಿದೆ ಎಂದು ಫೇಕ್ ಕಸ್ಟಮ್ಸ್ ಅಧಿಕಾರಿಗಳು ನಕಲಿ ಲೆಟರ್ ತೋರಿಸಿದ್ದಾರೆ. ಬಳಿಕ ಮಹಿಳೆ ಬಳಿ 80 ಲಕ್ಷ ರೂಪಾಯಿಯನ್ನು ಪೀಕಿದ್ದಾರೆ.
ಹಣ ಕಳೆದು ಕೊಂಡ ಮೇಲೆ ಆಕೆ ತಾನು ಮೋಸ ಹೋಗಿರುವುದಾಗಿ ತಿಳಿದ್ದು ಬನಶಂಕರಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.